Breaking News

ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಕಲಬುರಗಿ: ಬಿಜೆಪಿ ಮುಖಂಡರ ಹತ್ಯೆಗೆ ಸಂಚು ರೂಪಿಸಿರುವ ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜಗತ್ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಜಗತ್ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು, ವಾಹನಗಳ ಸಂಚಾರ ತಡೆದು ಟೈರ್‌ಗಳಿಗೆ ಬೆಂಕಿ ಹಚ್ಚಿದರು.
ಪೊಲೀಸ್, ಜಿಲ್ಲಾಡಳಿತ, ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಘೋಷಣೆ ಕೂಗಿದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಬೀದರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವ ಗುತ್ತಿಗೆದಾರ ಸಚಿನ್‌ ಪಾಂಚಾಳ್‌ ಅವರು ತಮ್ಮ ಡೆತ್‌ನೋಟ್‌ನಲ್ಲಿ ಆಂದೋಲಾ ಸ್ವಾಮೀಜಿ, ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಮುಖಂಡರಾದ ಚಂದು ಪಾಟೀಲ, ಮಣಿಕಂಠ ರಾಠೋಡ ಹತ್ಯೆಗೆ ಕಾಂಗ್ರೆಸ್‌ ಮುಖಂಡರಾದ ರಾಜು ಕಪನೂರ, ನಂದಕುಮಾರ ನಾಗಭುಜಂಗೆ, ಗೋರಕನಾಥ ಸಜ್ಜನ, ಪ್ರತಾಪಧೀರ ಪಾಟೀಲ, ಮನೋಜ ಶೇಜೆವಾಲ, ರಾಮನಗೌಡ ಪಾಟೀಲ ಎಂಬುವವರು ಸಂಚು ರೂಪಿಸಿದ್ದಾರೆ ಎಂದು ಬರೆದಿದ್ದಾರೆ. ಹತ್ಯೆಗೆ ಸಂಚು ರೂಪಿಸಿದವರ ವಿರುದ್ಧ ದೂರು ಕೊಡಲು ಹೋದಾಗ ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು ಹಿಂದೇಟು ಹಾಕಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬಿಜೆಪಿ ಮುಖಂಡರ ಕೊಲೆಯ ಸಂಚು ರೂಪಿಸಿರುವವರ ವಿರುದ್ಧ ದೂರು ನೀಡಲು ಹೋದರೆ, ಪೊಲೀಸರು ದೂರು ಸ್ವೀಕರಿಸಿ ಹಿಂಬರಹವೂ ಕೊಡಲಿಲ್ಲ. ಕಲಬುರಗಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಸೇರಿದಂತೆ ಬಿಜೆಪಿಯ ಮಾಜಿ ಶಾಸಕರು, ಮುಖಂಡರನ್ನು ಮೂರು ಗಂಟೆ ಕಾಯಿಸಿದ್ದಾರೆ. ಶಾಸಕರ ಬಗ್ಗೆ ಏಕವಚನದಲ್ಲಿ ಮಾತನಾಡಿದ ಇನ್‌ಸ್ಪೆಕ್ಟರ್‌ ಶಕೀಲ್ ಅಂಗಡಿ ಅವರನ್ನು ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೊಲೆಗೆ ಸಂಚು ರೂಪಿಸಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಪ್ರತಿಭಟನೆಯಲ್ಲಿ ಶಾಸಕ ಬಸವರಾಜ ಮತ್ತಿಮಡು, ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಮುಖಂಡರಾದ ಚಂದು ಪಾಟೀಲ, ಶಿವರಾಜ ಪಾಟೀಲ ರದ್ದೇವಾಡಗಿ, ಅಮರನಾಥ ಪಾಟೀಲ ಸೇರಿದಂತೆ ಹಲವಾರು ಪಾಲ್ಗೊಂಡಿದ್ದಾರೆ.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *