ಬ್ರೆಜಿಲ್: ಬ್ರೆಜಿಲ್, ದಕ್ಷಿಣ ಅಮೇರಿಕಾ ಸೇರಿದಂತೆ ಕೆಲ ಕಡೆ ಬರ ಪರಿಸ್ಥಿತಿ ಭೀಕರವಾಗಿದೆ. ಬರ ಉಂಟಾದಾಗ ಮೊದಲು ಜಲ ಮೂಲಗಳು ಬತ್ತಿ ಹೋಗುತ್ತವೆ, ಅಲ್ಲಿನ ಜನ ಹನಿ ನೀರಿಗೂ ಒದ್ದಾಡುತ್ತಾರೆ. ಈಗ ಇಂತಹದ್ದೇ ಒಂದು ಬರ ಪರಿಸ್ಥಿತಿಯನ್ನು ಮತ್ತೊಂದು ನದಿ ಎದುರಿಸುತ್ತಿದೆ.
ವಿಶ್ವದ ಅತಿದೊಡ್ಡ ನದಿ ಅನ್ನೋ ಹೆಗ್ಗಳಿಕೆ ಪಡೆದಿರುವ ಅಮೆಜಾನ್ ನದಿ ಬರಿದಾಗ್ತಿದೆ. ಅಮೆಜಾನ್ ನದಿಯ ಜಲಾನಯನ ಪ್ರದೇಶವು ಅತ್ಯಂತ ಕೆಟ್ಟ ಬರವನ್ನು ಅನುಭವಿಸುತ್ತಿದ್ದು, ಎಂದೂ ಕಂಡು ಕೇಳರಿಯದ ರೀತಿಯಲ್ಲಿ ನೀರಿನ ಮಟ್ಟವು ಕನಿಷ್ಠ ಮಟ್ಟಕ್ಕೆ ಕುಸಿಯುತ್ತಿದೆ. ಈ ಪರಿಸರದ ಬಿಕ್ಕಟ್ಟು ವನ್ಯಜೀವಿಗಳು ಮತ್ತು ಸ್ಥಳೀಯ ಸಮುದಾಯಗಳ ಮೇಲೆ ವ್ಯಾಪಕವಾದ ಪರಿಣಾಮ ಬೀರುತ್ತಿದೆ ಮತ್ತು ಹವಾಮಾನ ಬದಲಾವಣೆಯ ವೇಗವರ್ಧಿತ ಪರಿಣಾಮಗಳ ಬಗ್ಗೆ ವಿಶ್ವಕ್ಕೆ ಎಚ್ಚರಿಕೆ ಗಂಟೆಯಾಗಿದೆ.
ಬ್ರೆಜಿಲ್‌ನ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಸಂಸ್ಥೆ ಸೆಮಾಡೆನ್ ಪ್ರಸ್ತುತ ಬರವನ್ನು ಇದುವರೆಗೆ ದಾಖಲಿಸಿದ ಅತ್ಯಂತ ತೀವ್ರ ಮತ್ತು ವ್ಯಾಪಕ ಬರ ಎಂದು ವಿವರಿಸಿದೆ. ಗ್ರೀನ್‌ಪೀಸ್ ವಕ್ತಾರ ರೊಮುಲೊ ಬಟಿಸ್ಟಾ ಈ ವರ್ಷದ ಬರಗಾಲದ ನಿರ್ಣಾಯಕ ಸ್ವರೂಪವನ್ನು ಒತ್ತಿಹೇಳಿದರು. ಕಳೆದ ವರ್ಷಕ್ಕಿಂತ ಈ ವರ್ಷ ಬರ ಪರಿಸ್ಥಿತಿ ಕೆಟ್ಟದಾಗಿದೆ, ಬರಗಾಲದ ಪರಿಣಾಮಗಳು ನದಿಗಳ ಆಚೆಗೆ ವಿಸ್ತರಿಸುತ್ತವೆ, ಬ್ರೆಜಿಲ್‌ನಾದ್ಯಂತ ಮರಗಿಡಗಳು ನೀರಿಲ್ಲದೇ ಒಣಗಿ ಹೋಗಿವೆ. ಇಲ್ಲಿನ ಪ್ರಮುಖ ಕೃಷಿ ಕಾಫಿಯ ಮೇಲೂ ಕೆಟ್ಟ ಪರಿಣಾಮ ಉಂಟಾಗಿದೆ. ದಕ್ಷಿಣ ಅಮೆರಿಕಾದ ನಗರಗಳಲ್ಲಿ ಕಾಳ್ಗಿಚ್ಚು ಅಲ್ಲಲ್ಲಿ ಉಂಟಾಗುತ್ತಿದೆ ಎಂದು ತಿಳಿಸಿದರು. ಅಮೆಜಾನ್‌ನ ಅತಿದೊಡ್ಡ ನಗರವಾದ ಮನೌಸ್‌ನಲ್ಲಿ ಬರಗಾಲ ತಾಂಡವವಾಡುತ್ತಿದೆ. ನೀರಿನ ಮಟ್ಟವು ಕಳೆದ ವರ್ಷ ಅಕ್ಟೋಬರ್‌ಗಿಂತ ದಾಖಲೆಯ ಕಡಿಮೆ ಮಟ್ಟವನ್ನು ತಲುಪುತ್ತಿದೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಪರಿಸ್ಥಿತಿ ಹದಗೆಟ್ಟಿದೆ ಎಂದು ವರದಿಗಳು ತಿಳಿಸಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

