Breaking News

ಬಜೆಟ್ ಸಿದ್ಧತೆಗಾಗಿ ಇಂದು ವಿವಿಧ ಉದ್ಯಮ ವಲಯದ ಪ್ರತಿನಿಧಿಗಳ ಜೊತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸಭೆ

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಸಿದ್ಧತೆ ಭರದಿಂದ ಸಾಗುತ್ತಿದ್ದು ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಉದ್ಯಮ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಪ್ರಮುಖ ಭಾಗಿದಾರರು ಮತ್ತು ಪ್ರತಿನಿಧಿಗಳ ಜೊತೆ ಅವರು ಬಜೆಟ್ ಪೂರ್ವಭಾವಿ ಚರ್ಚೆಗಳನ್ನು ನಡೆಸಲಿದ್ದಾರೆ. ವರದಿಗಳ ಪ್ರಕಾರ ಇವತ್ತು ಈ ಮಹತ್ವದ ಸಭೆ ನಡೆಯಲಿದೆ. ಔದ್ಯಮಿಕ ಬೆಳವಣಿಗೆಯನ್ನು ಉತ್ತೇಜಿಸುವ, ಗುಣಮಟ್ಟದ ಆರೋಗ್ಯ ಉಪಚಾರದ ಸೌಲಭ್ಯ ಹೆಚ್ಚಿಸುವ ಹಾಗೂ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ನೀತಿಗಳನ್ನು ರೂಪಿಸಲು ಈ ಸಭೆಯಲ್ಲಿ ಸಲಹೆ ಮತ್ತು ಸಮಾಲೋಚನೆಗಳು ನಡೆಯುವ ನಿರೀಕ್ಷೆ ಇದೆ.
ವಿವಿಧ ಉದ್ಯಮ ವಲಯದ ಪ್ರತಿನಿಧಿಗಳು, ಶಿಕ್ಷಣ ಹಾಗೂ ಆರೋಗ್ಯ ಉಪಚಾರ ಕ್ಷೇತ್ರದ ಪರಿಣಿತರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ದೇಶದಲ್ಲಿ ಉತ್ಪಾದನಾ ಕ್ಷೇತ್ರಕ್ಕೆ ಪುಷ್ಟಿ ತರಲು ಸರ್ಕಾರ ಅವಿರತ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಈ ಸಭೆಯಲ್ಲಿ ಉದ್ಯಮ ಪ್ರತಿನಿಧಿಗಳ ಸಲಹೆಗಳು ಸರ್ಕಾರಕ್ಕೆ ವಿಶೇಷ ನೀತಿಗಳನ್ನು ರೂಪಿಸಲು ಸಹಾಯಕವಾಗಬಹುದು.
ಹಾಗೆಯೇ, ಭಾರತದ ಶಿಕ್ಷಣ ಕ್ಷೇತ್ರವನ್ನು ಜಾಗತಿಕ ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಸುಧಾರಣೆಗಳನ್ನು ತರಲು ಸರ್ಕಾರ ಹೊರಟಿದೆ. ಬಜೆಟ್​ನಲ್ಲಿ ಕೆಲ ಮಹತ್ವದ ಘೋಷಣೆಗಳಾಗುವ ನಿರೀಕ್ಷೆ ಇದೆ. ಬಜೆಟ್ ಪೂರ್ವಬಾವಿ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಲಹೆಗಳು ಸಿಗಬಹುದು.
ಮೋದಿ 3.0 ಸರ್ಕಾರದ ಮೊದಲ ಬಜೆಟ್ ಜುಲೈನಲ್ಲಿ ನಡೆದಿತ್ತು. ಈಗ ಎರಡನೇ ಬಜೆಟ್ ಫೆಬ್ರುವರಿ 1ರಂದು ನಡೆಯಲಿದೆ. ಬಜೆಟ್​ಗೆ ಕೆಲ ತಿಂಗಳು ಮುಂಚಿನಿಂದಲೇ ಹಣಕಾಸು ಇಲಾಖೆ ಸಕಲ ತಯಾರಿಗಳನ್ನು ನಡೆಸುತ್ತದೆ. ಎಲ್ಲಾ ಕ್ಷೇತ್ರಗಳ ಮತ್ತು ಉದ್ಯಮ ವಲಯದ ಭಾಗಿದಾರರ ಜೊತೆ ಸಲಹೆ ಸಮಾಲೋಚನೆಗಳನ್ನು ನಡೆಸಲಾಗುತ್ತದೆ. ವಿವಿಧ ಇಲಾಖೆಗಳು, ಸಚಿವಾಲಯದವರ ಜೊತೆಯೂ ಸಮಾಲೋಚನೆ ನಡೆಯುತ್ತದೆ.
ಚುನಾವಣೆ ಈಗಷ್ಟೇ ಮುಗಿದಿರುವುದರಿಂದ ಸರ್ಕಾರ ಜನಪ್ರಿಯ ಯೋಜನೆಗಳಿಗೆ ಪ್ರಾಮುಖ್ಯ ನೀಡುವ ಸಾಧ್ಯತೆಗಿಂತ ಸುಧಾರಣೆಗಳತ್ತ ಗಮನ ಕೊಡುವ ಸಾಧ್ಯತೆ ಹೆಚ್ಚಿರುತ್ತದೆ. ಅಂತೆಯೇ, ಇದು ಸರ್ಕಾರದ ಒಳ ಇಂಗಿತವನ್ನು ತೋರಿಸುವ ಬಜೆಟ್ ಆದ್ದರಿಂದ ಸಾಕಷ್ಟು ಕುತೂಹಲವೂ ಇದೆ.

Share News

About bigtvnews22

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *