ನವದೆಹಲಿ: ಹೊಸ ವರ್ಷ ಆರಂಭವಾಗುವ ಕೆಲವೇ ಹೊತ್ತಿಗೆ ಮೊದಲು ಮಣಿಪುರ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. 7ನೇ ವೇತನ ಆಯೋಗದ ವರದಿಯ ಅನ್ವಯ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ತುಟ್ಟಿ ಭತ್ಯೆಯ ದರಗಳನ್ನು ಪರಿಷ್ಕರಣೆ ಮಾಡಿ ಆದೇಶವನ್ನು ಹೊರಡಿಸಿದೆ.
ಇನ್ನು ಮುಂದೆ ರಾಜ್ಯ ಸರ್ಕಾರಿ ನೌಕರರು ಶೇ 32ರ ಬದಲು ಶೇ 39ರಷ್ಟು ತುಟ್ಟಿಭತ್ಯೆಯನ್ನು ಪಡೆಯಲಿದ್ದಾರೆ.
ಈ ಕುರಿತ ಕಡತಕ್ಕೆ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಸಹಿ ಹಾಕಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರ ಶೇ 7ರಷ್ಟು ತುಟ್ಟಿಭತ್ಯೆ (ಡಿಎ) ಏರಿಕೆ ಮಾಡಿದೆ. ರಾಜ್ಯದಲ್ಲಿನ ಹೊಸ ಮೂಲ ಸೌಲಭ್ಯ ಯೋಜನೆಗಳು, ಸ್ಟಾರ್ಟ್ ಅಪ್‌ಗಳಿಗೆ ನೀಡಿರುವ ಆದ್ಯತೆಯ ಕುರಿತು ಸಹ ಮುಖ್ಯಮಂತ್ರಿಗಳು ವಿವರಣೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಉದ್ಯೋಗ ಸಹಾಯ ಯೋಜನೆಯ ಅನ್ವಯ ಹಿಂಸಾಚಾರದ ಸಂದರ್ಭದಲ್ಲಿ ಬೇರೆ ಕಡೆ ಸ್ಥಳಾಂತರಗೊಂಡ 426 ಜನರಿಗೆ ಅಡಮಾನ ರಹಿತವಾದ ಸಾಲವನ್ನು ನೀಡಲಾಗುತ್ತಿದೆ. 50 ಸಾವಿರ ರೂ. ತನಕ ಈ ಸಾಲ ದೊರೆಯಲಿದ್ದು, ಅವರು ಹೊಸ ಉದ್ಯಮ ಆರಂಭಿಸಲು ಯೋಜನೆ ಅನ್ವಯ ಸಹಕಾರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





