Breaking News

ಅಜ್ಮೀರ್ ದರ್ಗಾಕ್ಕೆ ಪ್ರಧಾನಿ ಮೋದಿ ಪರವಾಗಿ ಚಾದರ್ ಅರ್ಪಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು

ಜೈಪುರ: ಸೂಫಿ ಸಂತ ಅಜ್ಮೀರ್‌ನ ಖಾಜಾ ಮೊಯಿನುದ್ದೀನ್ ಚಿಶ್ತಿ ಅವರ ಉರುಸ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ ‘ಚಾದರ್‌’ ಅನ್ನು ಅವರ ಪರವಾಗಿ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ದರ್ಗಾಕ್ಕೆ ಇಂದು ಸಮರ್ಪಿಸಿದರು.
ಅಜ್ಮೀರ್ ಷರೀಫ್ ಉರುಸ್: ದರ್ಗಾಕ್ಕೆ ಅರ್ಪಿಸಲು ಚಾದರ್ ನೀಡಿದ ಪ್ರಧಾನಿ ಮೋದಿ, ಭಾರಿ ಭದ್ರತೆಯೊಂದಿಗೆ ಸಚಿವರು ದರ್ಗಾಕ್ಕೆ ಆಗಮಿಸಿದರು.
ದೆಹಲಿಯಿಂದ ಜೈಪುರಕ್ಕೆ ವಿಮಾನದಲ್ಲಿ ಬಂದ ಅವರು, ಬಳಿಕ ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಅಜ್ಮೀರ್‌ಗೆ ತಲುಪಿದರು.‌
ವಿಮಾನ ನಿಲ್ದಾಣದಲ್ಲಿ ರಾಜ್ಯ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಪದಾಧಿಕಾರಿಗಳು ಅವರನ್ನು ಬರಮಾಡಿಕೊಂಡರು.
ಪ್ರಧಾನ ಮಂತ್ರಿಯವರ ಸಹೋದರತ್ವದ ಹಾಗೂ ದೇಶ ಒಗ್ಗಟ್ಟಾಗಿರಬೇಕು ಎನ್ನುವ ಸಂದೇಶದೊಂದಿಗೆ ಅಜ್ಮೀರ್‌ಗೆ ತೆರಳುತ್ತಿದ್ದೇನೆ’ ಎಂದು ರಿಜಿಜು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಹೇಳಿದರು.
ಉರುಸಿನ ಈ ಶುಭ ಸಂದರ್ಭದಲ್ಲಿ, ದೇಶದಲ್ಲಿ ಉತ್ತಮ ವಾತಾವರಣ ಸೃಷ್ಠಿಸಲು ನಾವು ಬಯಸುತ್ತೇವೆ. ದೇಶದ ಸಾಮರಸ್ಯಕ್ಕೆ ಧಕ್ಕೆಯಾಗುವ ಕೆಲಸವನ್ನು ಯಾರೂ ಮಾಡಬಾರದು’ ಎಂದು ರಿಜಿಜು ನುಡಿದರು.
ನೀವು ಹಿಂದುವೋ, ಮುಸಲ್ಮಾನನೋ, ಕ್ರೈಸ್ತನೋ, ಪಾರ್ಸಿಯೋ, ಬುದ್ಧನೋ ಅಥವಾ ಜೈನನೋ ಎಲ್ಲರನ್ನೂ ದರ್ಗಾದಲ್ಲಿ ಸ್ವಾಗತಿಸಲಾಗುತ್ತದೆ. ಲಕ್ಷಾಂತರ ಜನರು ದರ್ಗಾಕ್ಕೆ ಭೇಟಿ ನೀಡುತ್ತಾರೆ. ಅವರಿಗೆ ಯಾವ ತೊಂದರೆಯೂ ಆಗಕೂಡದು. ಪ್ರಕ್ರಿಯೆ ಸರಳವಾಗಿರಬೇಕು ಎಂದು ಅವರು ಹೇಳಿದರು.
ದರ್ಗಾವನ್ನು ಶಿವ ದೇಗುಲದ ಮೇಲೆ ನಿರ್ಮಿಸಲಾಗಿದೆ ಎಂದು ಸ್ಥಳೀಯ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ‘ನಾನು ಇಲ್ಲಿ ಚಾದರ್ ಅರ್ಪಿಸಲಷ್ಟೇ ಬಂದಿದ್ದೇನೆ’ ಎಂದರು.
ನಾನು ಏನನ್ನೂ ಪ್ರದರ್ಶಿಸಲೋ, ಅಥವಾ ಏನಾದರೂ ಹೇಳಲೋ ಇಲ್ಲಿಗೆ ಬರಲಿಲ್ಲ. ದೇಶದ ಜನರೆಲ್ಲರೂ ನೆಮ್ಮದಿಯಿಂದ ಇರಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಸಂದೇಶದೊಂದಿಗೆ ತೆರಳುತ್ತಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.
ಈ ಹಿಂದೆ ಇದ್ದ ಶಿವನ ದೇಗುಲವನ್ನು ಧ್ವಂಸ ಮಾಡಿ ದರ್ಗಾ ನಿರ್ಮಾಣ ಮಾಡಲಾಗಿದೆ ಎಂದು ಹಿಂದೂ ಸಂಘಟನೆ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಬಳಿಕ ಅಜ್ಮೀರ್ ದರ್ಗಾ ಸಮಿತಿ, ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಹಾಗೂ ಪುರಾರತ್ವ ಸರ್ವೇಕ್ಷಣಾಲಯಕ್ಕೆ ಕೋರ್ಟ್ ನೋಟಿಸ್ ಜಾರಿ ಮಾಡಿತ್ತು.
ಸುಪ್ರೀಂ ಕೋರ್ಟ್‌ನ ಆದೇಶದಿಂದಾಗಿ ವಿಚಾರಣೆ ಸ್ಥಗಿತಗೊಂಡಿತ್ತು.
ಈ ಬಾರಿಯ ಉರುಸ್‌ಗೆ ಚಾದರ್ ಕಳುಹಿಸಬಾರದು ಎಂದು ಹಿಂದೂ ಸೇನಾ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಪ್ರಧಾನಿ ಮೋದಿಗೆ ಮನವಿಯನ್ನೂ ಸಲ್ಲಿಸಿದ್ದರು.
ಖಾಜಾ ಮೊಯಿನುದ್ದೀನ್ ಚಿಶ್ತಿಯವರ ಸಾವಿನ ವರ್ಷಾಚರಣೆ ಪ್ರಯುಕ್ತ ಅಜ್ಮೀರ್‌ನಲ್ಲಿ ವರ್ಷಂಪ್ರತಿ ಉರುಸ್ ನಡೆಯುತ್ತದೆ. ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷವೂ ಚಾದರ್ ಅರ್ಪಿಸುತ್ತಾರೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *