ಹಗರಿಬೊಮ್ಮನಹಳ್ಳಿ: ಪಟ್ಟಣದ ಮೂಲಕ ಹಾದುಹೋಗಿರುವ ಬೆಂಗಳೂರು -ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ -215 ತುಂಬೆಲ್ಲಾ ಆಳವಾದ ಕುಣಿಗಳೇ ತುಂಬಿವೆ. ಇಲ್ಲಿ ಸಂಚರಿಸಿದರೆ ಅಪಘಾತ ಮಾತ್ರವಲ್ಲ ದೂಳು ಉಚಿತ, ರೋಗ ಖಚಿತ ಎನ್ನುವಂತಾಗಿದೆ.
ಬನ್ನಿಕಲ್ಲು ಗ್ರಾಮದಿಂದ ಆರಂಭವಾಗಿರುವ ಈ ಹೆದ್ದಾರಿ ತಾಲ್ಲೂಕು ಕೇಂದ್ರದಿಂದ ರಾಷ್ಟ್ರೀಯ ಹೆದ್ದಾರಿ ತಲುಪಲು 20ಕಿಲೋ ಮೀಟರ್ ಅಂತರ ಇದೆ. ಪಟ್ಟಣದ ವಾಲ್ಮೀಕಿ ವೃತ್ತದಿಂದ ಕೆಚ್ಚಿನಬಂಡಿ, ಹಂಪಾಪಟ್ಟಣ ಕ್ರಾಸ್, ರಾಯರಾಳ ತಾಂಡಾ, ಗುಳೇದಾಳು ಕ್ರಾಸ್, ಓಬಳಾಪುರ, ಹಲಗಾಪುರ, ಮಗಿಮಾವಿನಹಳ್ಳಿ ಗ್ರಾಮಗಳನ್ನು ಸೇರಿ ರಾಷ್ಟ್ರೀಯ ಹೆದ್ದಾರಿ ತಲುಪುವ ಈ ರಸ್ತೆ ಡಾಂಬರೀಕರಣಗೊಂಡು ದಶಕ ಕಳೆದಿದೆ. ರಸ್ತೆಯ ತುಂಬೆಲ್ಲಾ ಮೀಟರ್ ಉದ್ದದ, ಅಡಿ ಆಳದ ಕುಣಿಗಳೇ ಬಿದ್ದಿವೆ. ಇದರಿಂದಾಗಿ ಇಲ್ಲಿ ಸಂಚರಿಸುವ ವಾಹನಗಳು ಅವಧಿಗೆ ಮುನ್ನವೇ ಗುಜರಿ ಸೇರಿ, ದುರಸ್ತಿಗೂ ಬಾರದ ಆತಂಕ ವಾಹನ ಸವಾರರಿಗಿದೆ.
ಜನಸಮಾನ್ಯರು ಜೀವ ಹಿಡಿದುಕೊಂಡೇ ಈ ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ರಾತ್ರಿ ಈ ರಸ್ತೆಯಲ್ಲಿ ವಾಹನಗಳಲ್ಲಿ ಸಂಚಾರ ನಡೆಸುವಾಗ ಸ್ವಲ್ಪ ಯಾಮಾರಿದರೂ ಅಪಘಾತ ಖಂಡಿತ ಎನ್ನುತ್ತಾರೆ ಸವಾರರು. ದ್ವಿಚಕ್ರ ವಾಹನ ಸವಾರರು ತಗ್ಗುಗಳನ್ನು ತಪ್ಪಿಸಲು ಹೋಗಿ ಬಿದ್ದು ಕೈಕಾಲು ಮುರಿದುಕೊಂಡಿರುವ ಘಟನೆಗಳಾಗಿವೆ.
ರಸ್ತೆಗೆ ಹೊಂದಿಕೊಂಡಿರುವ ಹತ್ತಾರು ಗ್ರಾಮಗಳ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಈ ರಸ್ತೆಯಲ್ಲಿಯೇ ದ್ವಿಚಕ್ರ ವಾಹನ, ಬಸ್ ಮತ್ತು ಸರಕು ಸಾಗಣೆ ವಾಹನಗಳಲ್ಲಿ ಬರುತ್ತಾರಾದರೂ ಪಟ್ಟಣ ತಲುಪುವುದಕ್ಕೆ ಹರಸಾಹಸ ಮಾಡಬೇಕು. ಪಟ್ಟಣದಲ್ಲಿರುವ ಆಸ್ಪತ್ರೆಗೆ ಬರುವ ರೋಗಿಗಳಂತೂ ರಸ್ತೆಯ ನರಕಯಾತನೆ ಅನುಭವಿಸುತ್ತಿದ್ದಾರೆ, ಆಂಬುಲೆನ್ಸ್‌ಗಳು ಈ ರಸ್ತೆಗಿಳಿದರೆ ವೇಗವೂ ಹೆಚ್ಚಿಸಲಾಗದೆ ತುರ್ತು ಚಿಕಿತ್ಸೆಗೆ ಈ ರಸ್ತೆಯಲ್ಲಿ ಸಂಚರಿಸಿದರೆ ರೋಗಿಯ ಕಥೆ ಮುಗಿದುಹೋಗುತ್ತಾರೆ ಎನ್ನುತ್ತಾರೆ ಓಬಳಾಪುರ ಗ್ರಾಮದ ಕೆ.ಕರಿಯಪ್ಪ.
ಹಗರಿಬೊಮ್ಮನಹಳ್ಳಿಯಿಂದ ಮಗಿಮಾವಿನಹಳ್ಳಿ ಗ್ರಾಮದವರೆಗಿನ ರಸ್ತೆಯನ್ನು ತುರ್ತಾಗಿ ದುರಸ್ತಿಗೊಳಿಸಬೇಕು. ಡಾಂಬರೀಕರಣ ಮಾಡಬೇಕು. ಈ ಮೂಲಕ ರೈತರು, ವಿದ್ಯಾರ್ಥಿಗಳು ಸೇರಿದಂತೆ ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಸಹಾಯ ಮಾಡಬೇಕು ಎನ್ನುತ್ತಾರೆ ಹಂಪಾಪಟ್ಟಣ ನಿವಾಸಿ ಜಿ.ಪ್ರವೀಣ್ ಕುಮಾರ್.
ನೂರಾರು ಎಕರೆ ಕಬ್ಬು ಬೆಳೆದಿರುವ ಈ ಭಾಗದ ರೈತರು ಸಕ್ಕರೆ ಕಾರ್ಖಾನೆಗಳಿಗೆ ಲಾರಿಗಳಲ್ಲಿ ಕಬ್ಬು ಸಾಗಣೆ ಮಾಡುವ ಸಂದರ್ಭದಲ್ಲಿ ರಸ್ತೆಯ ತಗ್ಗುಗಳಲ್ಲಿ ಲಾರಿ ಇಳಿದು ಉರುಳಿದ ಘಟನೆಗಳು ನಡೆದಿವೆ. ಹಲವು ಅವಘಡಗಳು ಸಂಭವಿಸಿವೆ.
ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿರುವ 20ಕಿ.ಮೀ ರಸ್ತೆ ಅಭಿವೃದ್ಧಿಗಾಗಿ ₹30 ಕೋಟಿ ಅನುದಾನದ ಅಗತ್ಯ ಇದೆ. ಈ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಸದ್ಯ ಕೊಟ್ಟೂರು ರಸ್ತೆ ಅಭಿವೃದ್ಧಿಗೆ ₹5 ಕೋಟಿ ಬಿಡುಗಡೆಯಾಗಿದೆ. -ಎಚ್.ನಾಗರಾಜ, ಹಗರಿಬೊಮ್ಮನಹಳ್ಳಿ ನಿವಾಸಿಮಗಿಮಾವಿನಹಳ್ಳಿ ರಾಜ್ಯ ಹೆದ್ದಾರಿಯನ್ನು ಮಾನದಂಡದಂತೆ ಶೀಘ್ರ ಅಭಿವೃದ್ಧಿಗೊಳಿಸಬೇಕು. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. -ಕುಪ್ಪನಕೇರಿ ವಿರೂಪಾಕ್ಷ, ಯುವ ಮುಖಂಡ ಮಗಿಮಾವಿನಹಳ್ಳಿ ನಿವಾಸಿಈ ರಸ್ತೆ ಮೊದಲು ಜಿಲ್ಲಾ ಮುಖ್ಯ ರಸ್ತೆಯಾಗಿತ್ತು. ಬಳಿಕ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿದರೂ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ ಈ ಕುರಿತು ಜನಪ್ರತಿನಿಧಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಈ ರಸ್ತೆ ಅಭಿವೃದ್ಧಿಗೊಂಡರೆ ಹತ್ತಾರು ಗ್ರಾಮಗಳ ಜನರಿಗೆ ಅನುಕೂಲವಾಗುತ್ತದೆ. ಲೋಕೋಪಯೋಗಿ ಇಲಾಖೆ ಎಇಇ ರವಿನಾಯ್ಕ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

