ಮಾನ್ವಿ: ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ರಾಯಚೂರು ಜಿಲ್ಲೆಗೆ ಏಮ್ಸ್ ಸಂಸ್ಥೆಯ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭರವಸೆ ನೀಡಿದರು.
ಪಟ್ಟಣದಲ್ಲಿ ಮಾಜಿ ಸಚಿವ ಕೆ.ಶಿವನಗೌಡ ನಾಯಕ ನೇತೃತ್ವದಲ್ಲಿ ಕೆಎಸ್‌ಎನ್ ಸಾಮಾಜಿಕ ಸೇವಾ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಅಧಿಕಾರದ ಅವಕಾಶ ದೊರೆತರೆ ಈ ಭಾಗದಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನ, ಯುವಕರು ಗುಳೆ ಹೋಗುವುದನ್ನು ತಪ್ಪಿಸಲು ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಆದ್ಯತೆ ನೀಡುವೆ’ ಎಂದರು.
ರಾಜಕೀಯ ನಾಯಕರು ಚುನಾವಣೆಗಳು ಸಮೀಪಿಸಿದಾಗ ಸಾಮೂಹಿಕ ವಿವಾಹ ಮತ್ತಿತರ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಆಯೋಜಿಸುವುದು ಸಹಜ. ಆದರೆ ಶಿವನಗೌಡ ನಾಯಕ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಬಡ ಕುಟುಂಬಗಳ ನೆರವಿಗಾಗಿ ಸಾಮೂಹಿಕ ವಿವಾಹವನ್ನು ಬೃಹತ್ ಪ್ರಮಾಣದಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ‘ತವರು ತಾಲ್ಲೂಕಿನ ಋಣ ತೀರಿಸಲು ಶಿವನಗೌಡ ನಾಯಕ ಸಾಮೂಹಿಕ ವಿವಾಹ ಸೇರಿದಂತೆ ಹಲವಾರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. 2028ಕ್ಕೆ ರಾಜ್ಯದಲ್ಲಿ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಬಿ.ವಿ. ನಾಯಕ, ಶಿವನಗೌಡ ನಾಯಕ ಶಾಸಕರಾಗಿ ಆಯ್ಕೆಯಾಗುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಬೈರತಿ ಬಸವರಾಜ ಮಾತನಾಡಿ, ‘ರಾಜ್ಯದಾದ್ಯಂತ ಉಳ್ಳವರಿಂದ ಬಡವರ ನೆರವಿಗಾಗಿ ಸಾಮೂಹಿಕ ವಿವಾಹ ಮತ್ತಿತರ ಸೇವಾ ಕಾರ್ಯಕ್ರಮಗಳು ಹೆಚ್ಚಾಗಬೇಕು’ ಎಂದರು.
ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್, ಮುಖಂಡರಾದ ಎಂ.ಈರಣ್ಣ, ಎ.ಬಾಲಸ್ವಾಮಿ ಕೊಡ್ಲಿ, ಮಲ್ಲನಗೌಡ ನಕ್ಕುಂದಿ ಮತ್ತಿತರರು ಮಾತನಾಡಿದರು. ಮಾಜಿ ಸಂಸದ ಬಿ.ವಿ.ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಮುಂಡರಗಿ ಶಿವಣ್ಣ ತಾತ, ಬಿಚ್ಚಾಲಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಗಬ್ಬೂರು ಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ, ಚೀಕಲಪರ್ವಿಯ ಸದಾಶಿವ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು, ಧರ್ಮಗುರುಗಳು ಸಾನ್ನಿಧ್ಯವಹಿಸಿದ್ದರು.
ಶಾಸಕರಾದ ಶೈಲೇಂದ್ರ ಬೆಲ್ದಾಳೆ, ದೊಡ್ಡನಗೌಡ ಪಾಟೀಲ, ಡಾ.ಶಿವರಾಜ ಪಾಟೀಲ ಹಾಗೂ ಹೇಮಲತಾ ನಾಯಕ, ಮಾಜಿ ಶಾಸಕರಾದ ಗಂಗಾಧರ ನಾಯಕ, ತಿಪ್ಪರಾಜು ಹವಾಲ್ದಾರ್ ಹಾಗೂ ಎನ್.ಶಂಕ್ರಪ್ಪ, ಕೆಎಸ್‌ಎನ್ ಸಾಮಾಜಿಕ ಸೇವಾ ಸಮಿತಿಯ ಅಧ್ಯಕ್ಷ ಎಸ್.ತಿಮ್ಮಾರೆಡ್ಡಿಗೌಡ ಭೋಗಾವತಿ, ಮುಖಂಡರಾದ ಜೆ.ಶರಣಪ್ಪಗೌಡ ಸಿರವಾರ, ಕೆ.ಕರಿಯಪ್ಪ, ವಿಶ್ವನಾಥ ಬನಹಟ್ಟಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಜೆ.ದೇವರಾಜ ಪಾಟೀಲ ಸಿರವಾರ, ಕೆ.ನಾಗಲಿಂಗಸ್ವಾಮಿ, ಕೆ.ಜಂಬಣ್ಣ, ನೀಲಗಲ್, ವೀರೇಶನಾಯಕ ಬೆಟ್ಟದೂರು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಾಲ್ಕು ಮುಸ್ಲಿಂ ಜೋಡಿ ಸೇರಿದಂತೆ 121 ಜೋಡಿ ವಧು ವರರು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು. ಸುಮಾರು ಒಂದು ಲಕ್ಷ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

