ಬೆಂಗಳೂರು: ಕರ್ನಾಟಕ ಸರ್ಕಾರ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಪ್ರಮುಖವಾಗಿ ಜನವರಿ 31ರಂದು ನಿವೃತ್ತರಾಗಲಿರುವ ಹಿರಿಯ ಐಎಎಸ್ ಅಧಿಕಾರಿ ಎಲ್. ಕೆ. ಅತೀಕ್ ಅವರ ಸೇವೆಯನ್ನು ಮುಂದುವರೆಸಲಾಗಿದ್ದು, ಅವರನ್ನು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸುವ ಸಮಯದಲ್ಲಿ ಈ ನೇಮಕ ಬಹಳ ಮಹತ್ವ ಪಡೆದಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಟಿ. ಮಹಾಂತೇಶ್ ಸರ್ಕಾರದ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-1) ಆದೇಶವನ್ನು ಹೊರಡಿಸಿದ್ದಾರೆ. 1/2/2025 ರಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ಐಎಎಸ್ ಅಧಿಕಾರಿ ಎಲ್. ಕೆ. ಅತೀಕ್ ಅವರನ್ನು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಎಲ್. ಕೆ. ಅತೀಕ್ (ಕೆಎನ್: 1991) ರಾಜ್ಯದ ಹಿರಿಯ ಐಎಎಸ್ ಅಧಿಕಾರಿ. ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ, ಬಿಡಿಎಯ ಮಹತ್ವದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆ ಅನುಷ್ಠಾನಕ್ಕಾಗಿ ರಚನೆ ಮಾಡಿರುವ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಅಪಾರ ಅನುಭವ ಹೊಂದಿದ್ದಾರೆ: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದಾಖಲೆಯ 16ನೇ ಬಜೆಟ್ ಮಂಡಿಸುವ ಸಮಯದಲ್ಲಿ ಎಲ್. ಕೆ. ಅತೀಕ್ ಅವರ ಸೇವೆ ಮುಂದುವರೆಸಿ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಎಲ್. ಕೆ. ಅತೀಕ್ ಮಾಜಿ ಪ್ರಧಾನಿ ದಿ. ಮನಮೋಹನ್ ಸಿಂಗ್ ಅವರ ಬಳಿ, ವಿಶ್ವಬ್ಯಾಂಕ್‌ನಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದವರು. ಆರ್ಥಿಕ ವಿಚಾರದಲ್ಲಿ ಅವರು ಅಪಾರ ಅನುಭವ ಹೊಂದಿದ್ದಾರೆ. ಅತೀಕ್ ಅವರ ನಿವೃತ್ತಿ ನಂತರ ಉತ್ತರಾಧಿಕಾರಿ ಹುಡುಕುವುದು ಅಷ್ಟು ಸುಲಭದ ಮಾತಲ್ಲ ಎಂಬ ಚರ್ಚೆಗಳು ಸರ್ಕಾರದ ವಲಯದಲ್ಲಿಯೇ ಕೇಳಿ ಬಂದಿತ್ತು.
ಸದ್ಯ ಎಲ್. ಕೆ. ಅತೀಕ್ ಅರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಜನವರಿ 31ರಂದು ನಿವೃತ್ತರಾಗಬೇಕಿತ್ತು. ಫೆಬ್ರವರಿ 1ರಿಂದ ಜಾರಿಗೆ ಬರುವಂತೆ ಅವರನ್ನು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

