Breaking News

ಹೊಸಪೇಟೆ-ಹಗರಿಬೊಮ್ಮನಹಳ್ಳಿ ಶಿವಮೊಗ್ಗ ಮಾರ್ಗವನ್ನು ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ: ಸಂಸದ ತುಕಾರಾಂ

ಹೊಸಪೇಟೆ: ಹೊಸಪೇಟೆ-ಹಗರಿಬೊಮ್ಮನಹಳ್ಳಿ, ಹರಿಹರ ಮಾರ್ಗವಾಗಿ ಶಿವಮೊಗ್ಗ ಮಾರ್ಗವನ್ನು ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ಹಂತದಲ್ಲಿದ್ದು ಈ ಭಾಗದ ಸಂಸದರೆಲ್ಲರೂ ಸೇರಿ ಪ್ರಧಾನಮಂತ್ರಿಗಳ ಬಳಿ ನಿಯೋಗ ತೆರಳಿ ಮಂಜೂರಾತಿಗೆ ಕ್ರಮವಹಿಸಲಾಗುತ್ತದೆ ಸಂಸದ ಈ.ತುಕಾರಾಮ್ ಹೇಳಿದರು.
ಹಗರಿಬೊಮ್ಮನಹಳ್ಳಿ ಪಟ್ಟಣದ ತಾಲೂಕು ಆಡಳಿತಸೌಧದ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ನಂತರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ಮರಿಯಮ್ಮನಹಳ್ಳಿ – ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ರಸ್ತೆ ಆರಂಭಿಸುವಂತೆ ಕೇಂದ್ರ ಸಾರಿಗೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಹಸಿರು ನಿಶಾನೆ ದೊರೆತಿದೆ. ಪ್ರಧಾನಿಮಂತ್ರಿಯವರ ಕಚೇರಿಯಲ್ಲಿ ಅನುಮೋದನೆಯ ಹಂತದಲ್ಲಿದ್ದು, ದಾವಣಗೆರೆ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್, ಶಿವಮೊಗ್ಗ ಸಂಸದರಾದ ಬಿ.ವೈ.ರಾಘವೇಂದ್ರ ಜತೆಗೆ ನಿಯೋಗ ತೆರಳಿ ಅನುಷ್ಟಾನಕ್ಕೆ ಮನವಿ ಮಾಡಲಾಗುವುದು ಎಂದರು.
ಹೊಸಪೇಟೆ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಸರ್ವೀಸ್ ರಸ್ತೆ, ಸೈನ್ ಬೋರ್ಡ್ ಸೇರಿದಂತೆ ಸುರಕ್ಷತಾ ಕ್ರಮಗಳಿಗಾಗಿ ಕೇಂದ್ರದಿಂದ ರೂ.54 ಕೋಟಿ ಬಿಡುಗಡೆಯಾಗಿದೆ ಎಂದರು.
ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಇಲಾಖೆಗಳ ಸಮನ್ವಯತೆ ಮುಖ್ಯವಾಗಿದೆ. ಪೂರ್ವ ತಯಾರಿ ಇಲ್ಲದೆ ಅಧಿಕಾರಿಗಳು ಸಭೆ ಬರಬೇಡಿ. ಸಭೆಗೆ ಬರುವ ಮುನ್ನ ಇಲಾಖೆಗಳ ಸಮರ್ಪಕ ಮಾಹಿತಿಯೊಂದಿಗೆ ದತ್ತಾಂಶಗಳ ಸಹಿತ ಹಾಜರಾಗಿ, ಪೂರ್ವ ಸಿದ್ದತೆಯಿಲ್ಲದೇ ಸಭೆಗೆ ಆಗಮಿಸಿದರೇ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಾಕೀತು ಮಾಡಿದರು.
ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಒಂದು ಗ್ರಾಮ ಪಂಚಾಯ್ತಿಯನ್ನು ಆಯ್ಕೆ ಮಾಡಿಕೊಂಡು ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಮಾದರಿ ಗ್ರಾಪಂಯನ್ನಾಗಿಸಲು ಯೋಜನೆ ರೂಪಿಸಲು ತಿಳಿಸಿ ಇದಕ್ಕೆ ಬೇಕಾದ ಅನುದಾನವನ್ನು ಸಿಎಸ್‍ಆರ್ ಯೋಜನೆಯಡಿ ಒದಗಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ದಾಳಿಂಬೆ, ಮಾವು, ಡ್ರ್ಯಾಗನ್ ಪ್ರೂಟ್ ಬೆಳೆಗೆ ರೈತರು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಇದಕ್ಕೆ ಉತ್ತೇಜನವಾಗಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ರೈತರಿಗೆ ಕೃಷಿ, ತೋಟಗಾರಿಕೆ ಪರಿಕರಗಳನ್ನು ವಿತರಣೆ ವಿತರಣೆ ಮಾಡಬೇಕು. ಕೂಡ್ಲಿಗಿಯಲ್ಲಿ ಹುಣೆಸೆ ಹಣ್ಣಿನ ಸಂಗ್ರಹ ಘಟಕ ಸ್ಥಾಪನೆಗೆ ಶೀಘ್ರ ಕ್ರಮವಹಿಸಲು ಸೂಚಿಸಿದರು.
ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೇಷ್ಮೆ ಬೆಳೆಗಾರರಿದ್ದಾರೆ., ಕೊಟ್ಟೂರುನಲ್ಲಿ ನೂಲು ಬಿಚ್ಚುವ ಕೇಂದ್ರ ಆರಂಭಿಸಲು ಯೋಜನೆ ರೂಪಿಸಿ ವರದಿ ಸಲ್ಲಿಸಲು ತಿಳಿಸಿ ಪಶು ಇಲಾಖೆಯಿಂದ ಜಿಲ್ಲೆಯ ಎಲ್ಲಾ ಜಾನುವಾರು ಚಿಕಿತ್ಸಾ ಕೇಂದ್ರಗಳಲ್ಲಿ ಅಗತ್ಯ ಲಸಿಕೆಗಳ ಕೊರತೆಯಾಗದಂತೆ ನಿಗಾವಹಿಸಿ ಅಗತ್ಯವಿದ್ದರೇ ಶಾಸಕರ, ಸಂಸದರ ಶಿಫಾರಸ್ಸು ಪತ್ರ ಪಡೆದು ಸಂಗ್ರಹಕ್ಕೆ ಮುಂದಾಗಬೇಕು ಎಂದರು.
ಅಂಗನವಾಡಿ, ಶಾಲೆಗಳು ಮತ್ತು ಸ್ಮಶಾನಗಳ ನಿವೇಶನಗಳ ಸಮಸ್ಯೆಗಳಿದ್ದರೇ ಜಿಲ್ಲಾಧಿಕಾರಿಗಳು ಸಮಸ್ಯೆ ಇತ್ಯರ್ಥಗೊಳಿಸಬೇಕು. ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲು ಸಿದ್ದರಿದ್ದೇವೆ. ಯಾವುದೇ ಕಟ್ಟಡಗಳು ಬಾಡಿಗೆ ಅಧಾರಿತ ಹಾಗೂ ಶೀಥಿಲಾವಸ್ಥೆಯಲ್ಲಿರದಂತೆ ಕಾಳಜಿ ವಹಿಸಿ ಶೈಕ್ಷಣಿಕ ಪ್ರಗತಿಗೆ ಅಂಗನವಾಡಿಗಳು ಬುನಾದಿ ಇದ್ದಂತೆ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ವಿಶೇಷ ತರಗತಿಗಳನ್ನು ಆಯೋಜಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಸಕ್ರಿಯ ಅಭ್ಯಾಸಕ್ಕೆ ಉತ್ತೇಜನ ನೀಡಲಾಗುತ್ತಿದೆ. ಹದಿನೈದು ದಿನಕ್ಕೊಮ್ಮೆ ಪರೀಕ್ಷೆ ಆಯೋಜನೆ. ಒಟ್ಟು ಜಿಲ್ಲೆಯಲ್ಲಿ 23,766 ವಿದ್ಯಾರ್ಥಿಗಳು ನೊಂದಾಯಿತರಾಗಿದ್ದಾರೆ ಎಂದು ಸಭೆಗೆ ತಿಳಿಸಿದಾಗ ಸಂಸದರು ಪ್ರತಿಕ್ರಿಯಿಸಿ ಈ ಬಾರಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಪರೀಕ್ಷಾ ಕೈಪಿಡಿ ಸಿದ್ಧಪಡಿಸಿ, ಸ್ವಂತ ವೆಚ್ಚದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಾನೇ ಉಚಿತವಾಗಿ ನೀಡುತ್ತೇನೆ. ಈ ಬಾರಿ ಫಲಿತಾಂಶದಲ್ಲಿ ಬಳ್ಳಾರಿ ಮತ್ತು ವಿಜಯನಗರ ಉನ್ನತ ಸ್ಥಾನದಲ್ಲಿರುವಂತೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸುವಂತೆ ಸೂಚಿಸಿದರು.
ಶಾಸಕರದ ಕೆ.ನೇಮಿರಾಜನಾಯ್ಕ ಮಾತನಾಡಿ ರೈತರ ವಿಮೆ ವಿಚಾರದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ರೈತರ ಹೆಸರಿನಲ್ಲಿ ಯಾರೋ ಹಣ ಹಾಕಿ ಬೆಳೆಹಾನಿ ಬಳಿಕ ವಿಮೆ ಹಣವನ್ನು ಪಡೆಯುತ್ತಿದ್ದಾರೆಂಬ ಮಾಹಿತಿ ಇದ್ದು ಇದಕ್ಕೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಖರೀದಿ ಕೇಂದ್ರಗಳ ಸಮರ್ಪಕವಾಗಿ ಮಾಹಿತಿಯನ್ನು ರೈತರಿಗೆ ನೀಡುವಂತೆ ತಿಳಿಸಿದರು.
ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಆರೋಗ್ಯ ಇಲಾಖೆಯಿಂದ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ಸೇವೆ ನೀಡಲು ಡಯಾಲಿಸಿಸ್ ಕೇಂದ್ರಗಳನ್ನು ಆರಂಭಿಸಲು ಕ್ರಮವಹಿಸಬೇಕು ಎಂದರು.
ಸಭೆಯಲ್ಲಿ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳು ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ಹಾಗೂ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Share News

About BigTv News

Check Also

ಚಿತ್ತಾಪುರದಲ್ಲಿ ರಸ್ತೆ ಕಾಮಗಾರಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ; ಹಲವರಿಗೆ ಗಾಯ

ಕಲಬುರಗಿ: ಚಿತ್ತಾಪುರ ತಾಲೂಕಿನ ರಾಂಪುರಹಳ್ಳಿಯಲ್ಲಿ ರಸ್ತೆ ಕಾಮಗಾರಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ರಸ್ತೆ …

Leave a Reply

Your email address will not be published. Required fields are marked *