ಕಲಬುರಗಿ: ಹಲವು ದಶಕಗಳ ಬೇಡಿಕೆಯಾಗಿರುವ ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರವಾಗಿರುವ ಕಲಬುರಗಿಯಲ್ಲಿ ರೈಲ್ವೇ ವಿಭಾಗೀಯ ಕಚೇರಿ ಸ್ಥಾಪನೆಗಾಗಿ 371 ಜೆ ವಿಧಿ ಜಾರಿ ಮಾದರಿ ಹೋರಾಟ ಕೈಗೊಳ್ಳಲು ವಾಣಿಜ್ಯೋದ್ಯಮಿಗಳು, ವಿವಿಧ ಸಂಘ- ಸಂಸ್ಥೆಗಳು ಹಾಗೂ ಹೋರಾಟಗಾರರು ಮುಂದಾಗಿದ್ದು, ಇದೇ ಜ.24 ರಂದು ಇಲ್ಲಿನ ರೈಲ್ವೇ ನಿಲ್ದಾಣದಲ್ಲಿ ರೈಲು ತಡೆ ಚಳವಳಿ ಮೂಲಕ ನಾಂದಿ ಹಾಡಲು ನಿರ್ಧರಿಸಿದ್ದಾರೆ.
ಕಲಬುರಗಿಯಲ್ಲಿ ರೈಲ್ವೆ ಕಚೇರಿ ಸ್ಥಾಪನೆಯಾಗುವವರೆಗೂ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ (ಕೆಕೆಸಿಸಿಐ) ಸಂಸ್ಥೆ ನೇತೃತ್ವದಲ್ಲಿ ವಾಣಿಜ್ಯೋದ್ಯಮಿಗಳು, ವಿವಿಧ ಸಂಘ- ಸಂಸ್ಥೆಗಳು ಹಾಗೂ ಹೋರಾಟಗಾರೆಲ್ಲರೂ ಒಗ್ಗೂಡಿ ಪ್ರಬಲ ಹೋರಾಟಕ್ಕೆ ಮುಂದಾಗಿದ್ದು, ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ವಿವಿಧ ಹಂತದ ಹೋರಾಟಗಳನ್ನು ಕೈಗೊಳ್ಳಲು ಈಗಲೇ ರೂಪು ರೇಷೆ ಹಾಕಿಕೊಳ್ಳಲಾಗಿದೆ ಎಂದು ಗುಡುಗಿದ್ದಾರೆ.
ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಯಾವುದೇ ಪ್ರಮುಖ ಕಾರ್ಯಗಳಾಗುತ್ತಿಲ್ಲ. ನಿರ್ಲಕ್ಷö್ಯತನದಿಂದ ಯಾವುದೇ ಯೋಜನೆ ಹಾಗೂ ಕೈಗಾರಿಕೆಗಳು ಬರುತ್ತಿಲ್ಲ. ಆದರೆ ಕಳೆದ ನಾಲ್ಕು ದಶಕಗಳ ಬೇಡಿಕೆಯಾಗಿರುವ ಅದರಲ್ಲೂ ಅತ್ಯಂತ ಸಮಂಜಸವಾಗಿರುವ ಕಲಬುರಗಿಯಲ್ಲಿನ ರೈಲ್ವೇ ವಿಭಾಗೀಯ ಕಚೇರಿಯನ್ನಾದರೂ ಸಾಕಾರಗೊಳಿಸುವಂತೆ ಹೋರಾಟಕ್ಕೆ ಮುಂದಾಗಿ ಇದೇ ಜನೇವರಿ 24 ರಂದು ಬೆಳಿಗ್ಗೆ 10.30ಕ್ಕೆ ಕಲಬುರಗಿ ರೈಲು ನಿಲ್ದಾಣದಲ್ಲಿ ಪುಣೆ-ಸಿಕಂದರಾಬಾದ್ ಶತಾಬ್ದಿ ರೈಲು ತಡೆ ಮೂಲಕ ಚಳವಳಿಗೆ ಧುಮುಕಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಶಶಿಕಾಂತ ಬಿ. ಪಾಟೀಲ್, ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಕಲಬುರಗಿ ರೈಲ್ವೇ ವಿಭಾಗೀಯ ಕಚೇರಿ ಹೋರಾಟದ ಗೌರವಾಧ್ಯಕ್ಷ ಲಿಂಗರಾeಪ್ಪ ಅಪ್ಪ ಹಾಗೂ ಹೋರಾಟಗಾರ ಅರುಣಕುಮಾರ ಪಾಟೀಲ್ ಕೊಡಲಹಂಗರಗಾ ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರೈಲು ತಡೆ ಚಳವಳಿ ಹಾಗೂ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರೆಸುವ ನಿಟ್ಟಿನಲ್ಲಿ ಈಗಾಗಲೇ ಕೆಕೆಸಿಸಿಐ ನೇತೃತ್ವದಲ್ಲಿ ಎಲ್ಲ ವಿಧದ ವ್ಯಾಪಾರೀಗಳು, ಉದ್ಯಮಿಗಳು ಹಾಗೂ ಹೋರಾಟಗಾರರೊಂದಿಗೆ ಮರ‍್ನಾಲ್ಕು ಸಭೆಗಳನ್ನು ನಡೆಸಿ ಪ್ರಥಮವಾಗಿ ರೈಲು ತಡೆ ಚಳವಳಿ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಕಚೇರಿಗಳಲ್ಲಿ ಮುತ್ತಿಗೆ ಹಾಕಲಾಗುವುದು. ಆದ್ದರಿಂದ ಕೇಂದ್ರ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಕಲಬುರಗಿಯಲ್ಲಿ ರೈಲ್ವೇ ಕಚೇರಿ ಸ್ಥಾಪನೆ ಮಾಡಿ ಮುಂದಾಗುವ ಹೋರಾಟಗಳನ್ನು ತಪ್ಪಿಸಬೇಕೆಂದು ಆಗ್ರಹಿಸಿದರು.
ಕೆಕೆಸಿಸಿಐ ಗೌರವ ಕಾರ್ಯದರ್ಶಿ ಮಂಜುನಾಥ ಜೇವರ್ಗಿ, ಪ್ರಮುಖರಾದ ಶರಣು ಪಪ್ಪಾ, ಶ್ರೀನಿವಾಸ ಸಿರನೂರಕರ್, ಬಸವರಾಜ ಕುನ್ನೂರ, ಆನಂದ ದಂಡೋತಿ, ಉತ್ತಮ ಬಜಾಜ್, ಸಂತೋಷ ಲಂಗರ್, ಚಂದ್ರಶೇಖರ ಕೋಬಾಳ, ಚೆನ್ನಬಸಯ್ಯ ನಂದಿಕೋಲ, ಚೆನ್ನಮಲ್ಲಿಕಾರ್ಜುನ ಅಕ್ಕಿ, ರವೀಂದ್ರ ಮಾದಮಶೆಟ್ಟಿ, ನಾಗರಾಜ ನಿಗ್ಗುಡಗಿ, ಸಂಗಮೇಶ ಕಲ್ಯಾಣಿ, ಜಗದೀಶ ಕಡಗಂಚಿ, ಶರಣಬಸಪ್ಪ ಮಚ್ಚೆಟ್ಟಿ, ಪ್ರೇಮ ಬಜಾಜ್ ಮುಂತಾದವರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

