Breaking News

ನಗರ ಪಟ್ಟಣ ಸ್ಥಳೀಯ ವ್ಯಾಪ್ತಿಯ ಅನಧಿಕೃತ ಮನೆ, ನಿವೇಶನಗಳಿಗೆ ಬಿ-ಖಾತಾ ನೀಡಲು ನಿರ್ಧಾರ: ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ನಗರ-ಪಟ್ಟಣ ಸ್ಥಳೀಯ ವ್ಯಾಪ್ತಿಯಲ್ಲಿ ಅನಧಿಕೃತ ಮನೆ, ನಿವೇಶನಗಳ ಮಾಲೀಕರಿಗೆ ಬಿ-ಖಾತಾ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಒಂದು ಬಾರಿಗೆ ಅನ್ವಯಿಸಿ ಇ-ಖಾತಾಗೆ ಸಮಾನಾಂತರವಾದ ಬಿ-ಖಾತಾ ನೀಡಲಿದೆ.
ವಿಕಾಸಸೌಧದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಈ ವಿಷಯ ತಿಳಿಸಿ, ಅನಧಿಕೃತ ಮನೆ/ನಿವೇಶನಗಳ ಮಾಲೀಕರು ಇದಕ್ಕಾಗಿ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗಿಲ್ಲ, ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ.
ಆನ್‌ಲೈನ್ ಮುಖೇನ ಬಿ-ಖಾತಾ (ಇ-ಆಸ್ತಿ) ತಲುಪಲಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಾಜ್ಯವ್ಯಾಪಿ ಅಭಿಯಾನ ನಡೆಯಲಿದೆ ಎಂದರು.
ಬೆಂಗಳೂರು ಹೊರತುಪಡಿಸಿ ನಗರ-ಪಟ್ಟಣಗಳಲ್ಲಿ ಒಟ್ಟು 55 ಲಕ್ಷ ಆಸ್ತಿ (ಮನೆ/ನಿವೇಶನ)ಗಳಿಗೆ ಇ-ದಾಖಲೆಯಿದೆ. ಉಳಿದ 34 ಲಕ್ಷ ಆಸ್ತಿಗಳು ಯಾವುದೇ ಖಾತೆಗಳಿಲ್ಲ. ಹೀಗಾಗಿ ಸಿಎಂ ಸೂಚನೆಯಂತೆ ಒಂದು ಬಾರಿಗೆ ಇಂತಹ ಆಸ್ತಿಗಳಿಗೆ ಬಿ-ಖಾತೆಗೆ ಸಮಾನಾಂತರವಾದ ಇ-ಖಾತಾ ವಿತರಿಸಲು ಸೂಚಿಸಿದ್ದಾರೆ.
ಫೆ.10ರಿಂದ ಅಭಿಯಾನ:
ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳದೇ ಈ ಜವಾಬ್ದಾರಿಯಾಗಿದೆ. ಆದರೂ ಅಭಿಯಾನ ರೂಪದಲ್ಲಿ ವೇಗವಾಗಿ ನಿರ್ವಹಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳಿಗೆ ಮೇಲ್ವಿಚಾರಣೆ ಒಪ್ಪಿಸಿ, ಮೂರು ತಿಂಗಳ ಗಡುವು ವಿಧಿಸಲಾಗಿದೆ ಎಂದು ತಿಳಿಸಲಾಗಿದೆ.
ಅನಧಿಕೃತ ಆಸ್ತಿಗಳಿಗೆ ಇ-ಖಾತಾ ನೀಡುವುದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ನಿಯಮಗಳ ಕರಡು ರಚಿಸಿ ಪ್ರಕಟಿಸಿದೆ. ಈ ಅಧಿಸೂಚನೆಗೆ ಸಾರ್ವಜನಿಕರು ಆಕ್ಷೇಪಣೆ ಅಥವಾ ಸಲಹೆ-ಸೂಚನೆ ಸಲ್ಲಿಸಲು ಫೆ.2 ಕೊನೇ ದಿನವಾಗಿದೆ.
ಸಲ್ಲಿಕೆಯಾದ ಆಕ್ಷೇಪಣೆ ಪರಿಶೀಲಿಸಿ ೆ.10ರೊಳಗೆ ಅಂತಿಮ ಅಧಿಸೂಚನೆ ಪ್ರಕಟಿಸಲಿದೆ. ನಂತರ ಫೆ.10ರಿಂದ ನಗರ-ಪಟ್ಟಣಗಳ ವ್ಯಾಪ್ತಿಯ 34 ಲಕ್ಷ ಆಸ್ತಿಗಳಿಗೆ ಖಾತಾ ವಿತರಿಸಲಾಗುತ್ತದೆ. ಅನಧಿಕೃತ ಬಡಾವಣೆಗಳಲ್ಲಿ ನಿವೇಶನ/ ಮನೆಗಳನ್ನು ಖರೀದಿಸಿದವರಲ್ಲಿ ಕ್ರಯಪತ್ರವಿದೆ.
ಇ-ಆಸ್ತಿ ಪತ್ರ ಲಭಿಸುವುದರಿಂದ ಒಂದಿಷ್ಟು ನಿರಾಳರಾಗಲಿದ್ದಾರೆ. ಅನಧಿಕೃತ ಮನೆ, ನಿವೇಶಗಳಿಗೆ ಅಗತ್ಯ ಸವಲತ್ತು ಕೊಟ್ಟು ತೆರಿಗೆ ವಂಚಿತವಾಗಿದ್ದ ನಗರ-ಸ್ಥಳೀಯ ಸಂಸ್ಥೆಗಳಿಗೆ ಅನುಕೂಲವಾಗಲಿದೆ.
ಅನಧಿಕೃತ ಆಸ್ತಿಗಳಿಗೆ ಬಿ-ಖಾತಾ ಮುಖೇನ ಭಾಗಶಃ ಮಾಲೀಕತ್ವ ಲಭಿಸಲಿದೆ. ಹಾಗೆಯ ನಗರ- ಪಟ್ಟಣ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ರೂಪದ ಆದಾಯವೂ ವೃದ್ಧಿಸಲಿದೆ. ಇದಾದ ಬಳಿಕ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇ-ಖಾತಾ ವಿತರಿಸಲಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಕೃಷ್ಣಬೈರೇಗೌಡ ವಿವರಿಸಿದರು.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *