ಬೆಂಗಳೂರು: ರಾಜ್ಯಾದ್ಯಂತ ತೀವ್ರ ಆತಂಕ ಮೂಡಿಸಿರುವ ಮೈಕ್ರೋ ಫೈನಾನ್ಸ್ ಅಟ್ಟಹಾಸಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಸುಗ್ರೀವಾಜ್ಞೆ ಮೂಲಕ ಹೊಸ ಮಸೂದೆಗೆ ಜಾರಿಗೆ ಅನುಮೋದನೆ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಬೆಳಿಗ್ಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಬಡ ಹೆಣ್ಣುಮಕ್ಕಳ ಬದುಕಿಗೇ ಸಂಚಕಾರ ತಂದಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲ ವಸೂಲಾತಿ ಕಿರುಕುಳಕ್ಕೆ ಬ್ರೇಕ್ ಹಾಕಲು ರೂಪಿಸಿರುವ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಇದೀಗ ರಚಿಸಿರುವ ಮಸೂದೆಗೆ ಇನ್ನಷ್ಟು ಅಂಶಗಳನ್ನು ಸೇರಿಸಿಬೇಕಾದ ಅಗತ್ಯದ ಕುರಿತು ಚರ್ಚಿಸಿದ ಸಚಿವ ಸಂಪುಟ, ಆ ಬಗ್ಗೆ ನಿರ್ಧಾರ ಕೈಗೊಳ್ಳುವ ಪರಮಾಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡುವ ಬಗ್ಗೆಯೂ ತೀರ್ಮಾನಿಸಿದೆ.
ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕಾಗಿ ಸಲ್ಲಿಸುವ ಮುನ್ನ ಇನ್ನೊಂದು ಸುತ್ತಿನ ಸಭೆ ಕರೆದು ಚರ್ಚಿಸಿ, ಹೊಸ ಅಂಶಗಳೊಂದಿಗೆ ಅಂತಿಮಗೊಳಿಸಲು ಕೂಡ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಆ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್ ಕೆ ಪಾಟೀಲ್, ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿ ಕಿರುಕುಳಕ್ಕೆ ಕಡಿವಾಣ ಹಾಕಲು ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು.
ರಾಜ್ಯದಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಅಮಾನವೀಯ ಸಾಲ ವಸೂಲಾತಿ ಪ್ರಕರಣಗಳಿಂದ ಜನ ನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇಂದು ಕೂಡ ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣ ವರದಿಯಾಗಿದೆ. ಆ ಹಿನ್ನೆಲೆಯಲ್ಲಿ ಸಾಲ ವಸೂಲಾತಿ ಕಿರುಕುಳ ತಡೆಗಾಗಿ ಮಸೂದೆ ತರಲು ತೀರ್ಮಾನಿಸಿ ಕೆಲವು ತಾಂತ್ರಿಕ ಅಂಶ ಚರ್ಚಿಸಿದ್ದೇವೆ. ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿಗಳು ಹಿರಿಯ ಸಚಿವರ ಸಭೆ ಕರೆದಿದ್ದಾರೆ. ಕೆಲವು ಮಹತ್ವದ ವಿಚಾರ ಇರುವುದರಿಂದ ಸಭೆ ಮಾಡುತ್ತಿದ್ದೇವೆ. ಸಂಜೆ 4 ಗಂಟೆಗೆ ಮಸೂದೆಗೆ ಸ್ಪಷ್ಟ ಚಿತ್ರಣ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸುಗ್ರೀವಾಜ್ಞೆ ತರಲು ಸಿಎಂಗೆ ಸಚಿವ ಸಂಪುಟ ಅಧಿಕಾರವನ್ನು ನೀಡಿದೆ. ಸಿಎಂ ಜೊತೆ ಸಭೆಯ ಬಳಿಕ ಕಾನೂನಾತ್ಮಕವಾಗಿ ತಿರ್ಮಾನ ಆಗಲಿದೆ. ಸಂಪುಟ ಸಭೆಯಲ್ಲಿ ಸಂಪೂರ್ಣ ಅಧಿಕಾರ ಸಿಎಂ ಅವರಿಗೆ ನೀಡಲಾಗಿದೆ. ನಮ್ಮಲ್ಲಿರುವ ಕಾನೂನುಗಳು ಕೆಲವು ಪ್ಲಸ್ ಆಗಲಿವೆ. ಕೆಲವು ಮೈನಸ್ ಆಗಲಿವೆ. ಹೀಗಾಗಿ ಕಾನೂನಾತ್ಮಕ ತೀರ್ಮಾನಕ್ಕೆ ಸಂಜೆ ಹಿರಿಯ ಸಚಿವರ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ಅಮಾನವೀಯವಾಗಿ ಸಾಲ ವಸೂಲಾತಿ ಮಾಡುತ್ತಿದ್ದು, ಹಲವು ಮಹಿಳೆಯರು ಮತ್ತು ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ ಕೆಲವು ಗ್ರಾಮಗಳಲ್ಲಿ ಸಾಲ ವಸೂಲಾತಿ ಕಿರುಕುಳ ತಾಳದೆ ಜನ ಊರು ಬಿಟ್ಟು ಗುಳೇ ಹೋಗಿದ್ದಾರೆ. ಇನ್ನೂ ಕೆಲವು ಕಡೆ ಮಹಿಳೆಯರು ಮನೆಬಿಟ್ಟು ಹೋಗಿರುವ ಪ್ರಕರಣಗಳು ನಡೆದಿವೆ. ಆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾಂಗಲ್ಯ ಸರ ಉಳಿಸಿ ಅಭಿಯಾನ ನಡೆಸಿದ್ದ ನೊಂದ ಮಹಿಳೆಯರು, ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರಿಗೆ ತಮ್ಮ ಮಾಂಗಲ್ಯ ಸರವನ್ನು ಅಂಚೆ ಮೂಲಕ ಕಳಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

