Breaking News

ಸಮಾಜದಲ್ಲಿನ ಜಾತಿ ವ್ಯವಸ್ಥೆ ಅಳಿದು ಸಮಸಮಾಜ ನಿರ್ಮಾಣಕ್ಕೆ ಅಂತರ್ಜಾತಿ ವಿವಾಹ ಹೆಚ್ಚಲಿ: ಸಿಎಂ ಸಿದ್ದರಾಮಯ್ಯ

ಹಗರಿಬೊಮ್ಮನಹಳ್ಳಿ: ಸಮಾಜದಲ್ಲಿನ ಜಾತಿ ವ್ಯವಸ್ಥೆ ಅಳಿದು ಸಮಸಮಾಜ ನಿರ್ಮಾಣವಾಗಬೇಕಿದ್ದರೆ ಅಂತರ್ಜಾತಿ ವಿವಾಹಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿಗೆ ಸಮೀಪದ ಬಂಡಿಹಳ್ಳಿಯಲ್ಲಿ ವಿಜಯನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸಿರಾಜ್ ಶೇಖ್‌ ಅವರ ಪುತ್ರನ ವಿವಾಹ ಸಂದರ್ಭದಲ್ಲಿ ಹಮ್ಮಿಕೊಂಡ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಾತ್ಯತೀತ ತತ್ವವನ್ನು ನಮ್ಮ ಸಂವಿಧಾನ ಬೋಧಿಸಿದೆ.
ಇದೇ ಆಶಯವನ್ನು ವ್ಯಕ್ತಪಡಿಸಿದ ಬಸವಣ್ಣವರು, ಜಾತಿಆಧಾರಿತ ಸಮಾಜ ವ್ಯವಸ್ಥೆ ಸಾಧುವಲ್ಲ ಎಂದು ಪ್ರತಿಪಾದಿಸಿದ್ದರು. ಆ ಆಶಯವನ್ನು ನಾವು ಆಚರಣೆಗೆ ತಂದಾಗ ಸಮಸಮಾಜ ಕನಸು ಸ್ವಲ್ಪಮಟ್ಟಿಗೆ ಈಡೇರಬಹುದು’ ಎಂದರು.
ಮನುಷ್ಯ ಹುಟ್ಟುವಾಗ ವಿಶ್ವಮಾನವನಾಗಿದ್ದು, ಜಾತಿಧರ್ಮಗಳ ಬಂಧನದಲ್ಲಿ ಸಿಲುಕಿ ಅಲ್ಪಮಾನವನಾಗುತ್ತಾನೆ. ಬಸವಣ್ಣನವರ ಕಾಲದಲ್ಲಿಯೇ ಅಂತರ್ಜಾತಿ ವಿವಾಹ ಪದ್ಧತಿ ಪ್ರಚಲಿತವಾಗಿತ್ತು. ಇತರ ಧರ್ಮಗಳನ್ನೂ ಗೌರವಿಸುವ ವ್ಯವಸ್ಥೆ ಸಮಾಜದಲ್ಲಿರಬೇಕು. ಚಲನೆರಹಿತವಾದ ಜಾತಿವ್ಯವಸ್ಥೆಯಲ್ಲಿ ನಾವಿದ್ದೇವೆ. ಆರ್ಥಿಕ ಹಾಗೂ ಸಾಮಾಜಿಕ ಸ್ವಾವಲಂಬನೆಯಿಂದ ಚಲನೆಯಿಲ್ಲದ ಸಮಾಜಕ್ಕೆ ಜೀವಬರುತ್ತದೆ. ನನ್ನ ಮೊದಲನೇ ಮಗ ಅಂತರ್ಜಾತಿ ವಿವಾಹವಾಗಿದ್ದ, ಈಗ ಅವನು ಇಲ್ಲ, ನನ್ನ ಎರಡನೇ ಮಗ ಮದುವೆಯೇ ಆಗಿಲ್ಲ’ ಎಂದರು.
ವಿವಾಹದ ಖರ್ಚುವೆಚ್ಚಗಳನ್ನು ಭರಿಸಲಾಗದ ಬಡಕುಟುಂಬಗಳಿಗೆ ಸಾಮೂಹಿಕ ವಿವಾಹ ವರದಾನ. ಸರಳ ಶೈಲಿಯಲ್ಲಿ ವಿವಾಹವಾಗುವ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ಕೆಳವರ್ಗದಲ್ಲಿ ಹುಟ್ಟಿದ ಮಾತ್ರಕ್ಕೆ ಬಡವರಾಗಿಯೇ ಉಳಿಯಬೇಕೆಂಬ ಭಾವನೆ ತಪ್ಪು. ಆರ್ಥಿಕವಾಗಿ ದುರ್ಬಲರಾಗಿರುವ ಜನರ ಕೊಂಡುಕೊಳ್ಳುವ ಶಕ್ತಿ ಹೆಚ್ಚಬೇಕು. ಅಂತೆಯೇ ಶ್ರೀಮಂತವರ್ಗದವರೂ ಕೂಡ ಬಡವರ ಸಹಾಯಕ್ಕೆ ಮುಂದಾಗಬೇಕು ಹಾಗೂ ಸಮಾಜದ ಋಣ ತೀರಿಸಲು ಪ್ರಯತ್ನಿಸಬೇಕು’ ಎಂದು ಮುಖ್ಯಮಂತ್ರಿ ಕೇಳಿಕೊಂಡರು.
11 ಮುಸ್ಲಿಂ ಜೋಡಿ ಹಾಗೂ 12 ಹಿಂದೂ ಜೋಡಿ ಸೇರಿ ಒಟ್ಟು 23 ಜೋಡಿ ಸಿಎಂ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕೊಟ್ಟೂರು ಮಠದ ಬಸವಲಿಂಗ ಸ್ವಾಮೀಜಿ, ನಂದಿಪುರದ ಮಹೇಶ್ವರ ಸ್ವಾಮೀಜಿ, ಗರಗ ನಾಗಲಾಪುರ- ಕುರುಗೋಡು ಒಪ್ಪತ್ತೇಶ್ವರ ಮಠದ ನಿರಂಜನ ಪ್ರಭುದೇಶಿಕರು ಸ್ವಾಮೀಜಿ, ಸಚಿವ ಜಮೀರ್ ಅಹ್ಮದ್ ಖಾನ್‌, ಸಂಸದ ಇ.ತುಕಾರಾಂ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಎಚ್‌.ಆರ್‌.ಗವಿಯಪ್ಪ, ಡಾ.ಎನ್‌.ಟಿ.ಶ್ರೀನಿವಾಸ್‌, ಎಂ.ಪಿ.ಲತಾ, ಬಿ.ಎಂ.ನಾಗರಾಜ್‌ ಭಾಗವಹಿಸಿದ್ದರು.

Share News

About bigtvnews22

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *