ಕಾಸರಗೋಡು :ಪ್ರತ್ಯೇಕವಾಗಿ ವಾಸಿಸುವ ಪತ್ನಿ ಹಾಗು ಆರು ವರ್ಷದ ಮೊಮ್ಮಗಳು ನಿದ್ದೆ ಮಾಡಿದ್ದ ಕೊಠಡಿಗೆ ಪೆಟ್ರೋಲ್ ಸುರಿದು ಕಿಚ್ಚಿಟ್ಟು ಕೊಲೆಗೈಯ್ಯಲು ಯತ್ನಿಸಿದ ಘಟನೆ ನಡೆದಿದೆ. ಕಿಚ್ಚಿಟ್ಟ ವ್ಯಕ್ತಿ ಸುಟ್ಟು ಗಾಯಗೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.ಪತ್ನಿ ಮತ್ತು ಮೊಮ್ಮಗಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.ಪಾಣತ್ತೂರು ನೆಲ್ಲಿಕುನ್ನು ನಿವಾಸಿ ಜೋಸೆಫ್(65) ಆಸ್ಪತ್ರೆಗೆ ದಾಖಲಾಗಿದ್ದಾರೆ. ಅ.30 ರಂದು ರಾತ್ರಿ 10.30 ಕ್ಕೆ ಈ ಘಟನೆ ನಡೆದಿದೆ. ಜೋಸೆಫ್ ಹಾಗು ಪತ್ನಿ ಸಿಸಿಲಿ ಹಲವು ವರ್ಷಗಳಿಂದ ಬೇರೆ ಬೇರೆ ವಾಸಿಸುತ್ತಿದ್ದಾರೆ. ಸಿಸಿಲಿ ಹಾಗು ಮಗ ಶಾಜಿ, ಆತನ ಪತ್ನಿ, ಮಗಳು ಒಂದು ಮನೆಯಲ್ಲಿ ವಾಸಿಸುತ್ತಿದ್ದಾರೆ. ಗುರುವಾರ ರಾತ್ರಿ ಸಿಸಿಲಿ ಹಾಗು ಮೊಮ್ಮಗಳು ನಿದ್ದೆ ಮಾಡಿದ್ದ ಕೊಠಡಿಯ ಕಿಟಕಿಯ ಮೂಲಕ ಒಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಬೆಂಕಿ ಹತ್ತುತ್ತಿದ್ದಂತೆ ಅಲ್ಲಿ ನಿದ್ದೆ ಮಾಡಿದ್ದ ಸಿಸಿಲಿ ಹಾಗು ಮಗು ಹೊರಗೆ ಓಡಿದ್ದರಿಂದ ಅಪಾಯದಿಂದ ಪಾರಾದರು.ಇದೇ ವೇಳೆ ಬೆಂಕಿ ಹಚ್ಚಿದ್ದ ಜೋಸೆಫ್ ಸುಟ್ಟು ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಕಿ ಹಚ್ಚಿದ್ದರಿಂದ ಮಂಚ, ಕಿಟಕಿ ಬೆಂಕಿಗಾಹುತಿಯಾಗಿದೆ. ಸ್ಥಳೀಯರು ಹಾಗು ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಆರಿಸಿದರು. ರಾಜಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

