ಹುಬ್ಬಳ್ಳಿ: ಕ್ಷುಲ್ಲಕ ಕಾರಣ ಹಾಗೂ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಅಣ್ಣನ ಮೇಲೆಯೇ ತಮ್ಮನು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಹಳೇಹುಬ್ಬಳ್ಳಿಯ ಶಿವಶಂಕರ ಕಾಲೋನಿಯಲ್ಲಿ ನಡೆದಿದೆ.ಶಿವಶಂಕರ ಕಾಲೋನಿಯ ನಿವಾಸಿ ಮಲ್ಲೇಶ್ ಪೂಜಾರ (42) ಅವರ ಮೇಲೆ, ಅವರ ಸ್ವಂತ ತಮ್ಮ ಪ್ರದೀಪ್ ಎಂಬಾತ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಲ್ಲೇಶ್ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.ಗುರುವಾರ ಬೆಳಿಗ್ಗೆ ಮಲ್ಲೇಶ್ ಅವರು ತಮ್ಮ ಮನೆಯ ಎದುರು ಕುಳಿತಿದ್ದ ವೇಳೆ, ಕುಡಿದ ಅಮಲಿನಲ್ಲಿ ಅಲ್ಲಿಗೆ ಬಂದ ಪ್ರದೀಪ್ ಹಳೆಯ ವಿಷಯಗಳನ್ನು ಕೆದಕಿ ಜಗಳ ಆರಂಭಿಸಿದ್ದಾನೆ. ಮಾತಿನ ಜಗಳ ವಿಕೋಪಕ್ಕೆ ತಿರುಗಿ, ಕೋಪೋದ್ರೇಕಗೊಂಡ ಪ್ರದೀಪ್ ತನ್ನ ಬಳಿ ಇದ್ದ ಚಾಕುವಿನಿಂದ ಮಲ್ಲೇಶ್ ಅವರ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಒಟ್ಟು 7 ಬಾರಿ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಲ್ಲೇಶ್ ಅವರನ್ನು ಸ್ಥಳೀಯರು ಹಾಗೂ ಕುಟುಂಬಸ್ಥರು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುವಿನ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.ಘಟನೆಯ ಮಾಹಿತಿ ಪಡೆದ ತಕ್ಷಣವೇ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಪ್ರದೀಪ್‌ನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

