ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್) ಜನರಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಈ ಭಾಗದ ಜನರಿಗೆ ಸಂಜೀವಿನಿಯಾಗಿದೆ. ಈಗಾಗಲೇ ಸಂಸ್ಥೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಚಾಲ್ತಿಯಲ್ಲಿವೆ. ಬೆಂಗಳೂರು ಹಾಗೂ ಮೈಸೂರು ಭಾಗದ ಆಸ್ಪತ್ರೆಗಳಿಗೆ ನೀಡುವ ಅನುದಾನದಂತೆ ಕಿಮ್ಸ್ ಆಸ್ಪತ್ರೆ ನಿರ್ವಹಣೆಗೆ ವಾರ್ಷಿಕವಾಗಿ ರೂ. 24 ಕೋಟಿ ಹೊರತಾಗಿ ಹೆಚ್ಚುವರಿಯಾಗಿ ರೂ. 30 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡುವುದು ಅವಶ್ಯಕವಾಗಿದೆ ಎಂದು ಕಿಮ್ಸ್ ನಿರ್ದೇಶಕರಾದ ಡಾ. ರಾಮಲಿಂಗಪ್ಪ ಅಂಟರತಾನಿ ಹೇಳಿದರು.
ಇಂದು ಕಿಮ್ಸ್ನ ಒಟಿ ಕಾಂಪ್ಲೆಕ್ಸ್ 5ನೇ ಮಹಡಿಯಲ್ಲಿರುವ ಚಾಲುಕ್ಯ ಕಾನ್ಪರೆನ್ಸ್ ಸಭಾಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತೆಗೆ ಬರುವ ರೋಗಿಗಳಿಗಾಗಿ ಆನ್‌ಲೈನ್ ಮೂಲಕ ಒಪಿಡಿ ನೋಂದಣಿಯನ್ನು ಆರಂಭಿಸಲಾಗಿದೆ. ತುರ್ತು ಚಿಕಿತ್ಸೆ, ಶಸ್ತç ಚಿಕಿತ್ಸೆ, ಕಿಡ್ನಿ ಕಸಿ, ಮೂಳೆ ಮಜ್ಜೆಯ ಕಸಿ, ಕಿಡ್ನಿ ಕಸಿ, ತೆರೆದ ಹೃದಯ ಶಸ್ತçಚಿಕಿತ್ಸೆ ಸೇರಿದಂತೆ ವಿವಿಧ ಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಅಲ್ಲದೇ ಪ್ಯಾರಾ ಮೆಡಿಕಲ್ ಕೋರ್ಸ್ ಕೂಡ ಆರಂಭಿಸಲಾಗಿದ್ದು, ಪ್ಯಾರಾ ಮೆಡಿಕಲ್ ಕಾಲೇಜ್ ಆರಂಭಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಶೌಚಾಲಯ, ಪಾರ್ಕಿಂಗ್ ಸಮಸ್ಯೆಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಹೀಗಾಗಿ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಸ್ಪತ್ರೆ ಒಳಗಡೆ ಉಗುಳುವುದನ್ನು ನಿಷೇಧಿಸಲಾಗಿದ್ದು, ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಆಸ್ಪತ್ರೆಯ ಸ್ವಚ್ಛತೆಗೆ ಆದ್ಯತೆ ನೀಡಲಾಗಿರುತ್ತದೆ. ಆಸ್ಪತ್ರೆಗೆ ಅವಶ್ಯಕವಾಗಿರುವ ವಿದ್ಯುತ್‌ನ್ನು ಹೆಸ್ಕಾಂ ಒದಗಿಸುತ್ತಿದೆ. ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ, ಯಶಸ್ವಿನಿ, ಆರೋಗ್ಯ ಸಂಜೀವಿನಿ ಸೇರಿದಂತೆ ವಿವಿಧ ಯೋಜನೆಗಳಡಿಯಲ್ಲಿ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ. ಆಸ್ಪತ್ರೆ ಹಾಗೂ ಕಾಲೇಜ್‌ಗೆ ಅಗತ್ಯವಿರುವ ಸಿಬ್ಬಂದಿಗಳನ್ನು ಕಾಲ ಕಾಲಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸ್ಪತ್ರೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಖಾಲಿಯಾದರೆ ಮಾತ್ರ ಹೊಸ ಉದ್ಯೋಗಾವಕಾಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಆಸ್ಪತ್ರೆ ಒಳಗಡೆ ಕ್ಯಾಂಟೀನ್ ಆರಂಭಿಸುವ ಕುರಿತು ಹಲವಾರು ಜನರು ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ ಈಗಾಗಲೇ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಡಯಟ್, ಶುಭ್ರವಾದ ಬಟ್ಟೆಗಳು, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಇನ್ಫೋಸಿಸ್ ಧರ್ಮಶಾಲಾ ಸೇವೆ ಸೇರಿದಂತೆ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





