ಬೆಂಗಳೂರು, ಜನವರಿ 21:
ತಮ್ಮ ವ್ಯಾಪ್ತಿಯಲ್ಲಿದ್ದ ಕೊಲೆ ಪ್ರಕರಣವನ್ನು ನಿರ್ಲಕ್ಷ್ಯ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜ್ಞಾನಭಾರತಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಂ.ಎಸ್. ರವಿ ಅವರನ್ನು ಅಮಾನತು ಮಾಡಿರುವ ಬೆನ್ನಲ್ಲೇ, ಈ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ.ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಅವರು ಮಂಗಳವಾರ ಇನ್‌ಸ್ಪೆಕ್ಟರ್ ರವಿ ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತುಗೊಳಿಸುವಂತೆ ಆದೇಶಿಸಿದ್ದರು. ಆದರೆ, ಈ ಅಮಾನತಿನ ಹಿಂದೆ ಹವಾಲ ದಂಧೆ ವಿರುದ್ಧ ನಡೆಸಿದ ದಾಳಿಯೇ ಪ್ರಮುಖ ಕಾರಣವಿರಬಹುದೇ

ಎಂಬ ಅನುಮಾನಗಳು ಇದೀಗ ಎದ್ದಿವೆ.ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಮಲ್ಲತ್ತಹಳ್ಳಿಯಲ್ಲಿ ಅನ್ನಪೂರ್ಣೇಶ್ವರಿನಗರದ ನಿವಾಸಿ ದೀಪಕ್ ರಾಜ್ (18) ಎಂಬ ಯುವಕನ ಕೊಲೆ ನಡೆದಿತ್ತು. ಈ ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಗೆ ಸೇರಿದ್ದರೂ, ಇನ್‌ಸ್ಪೆಕ್ಟರ್ ರವಿ ಪ್ರಕರಣ ದಾಖಲಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ನಂತರ ತಾವರೆಕೆರೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಬಳಿಕ ಮತ್ತೆ ಜ್ಞಾನಭಾರತಿ ಠಾಣೆಗೆ ಕೇಸ್ ವರ್ಗಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ಡಿಸಿಪಿ ವರದಿ ಸಲ್ಲಿಸಲಾಗಿತ್ತು.ಆದರೆ, ಜನವರಿ 15ರಂದು ಇನ್‌ಸ್ಪೆಕ್ಟರ್ ರವಿ ಅವರು ಹವಾಲ ಹಣ ಸಾಗಾಟದ ಖಚಿತ ಮಾಹಿತಿ ಆಧರಿಸಿ, ನಾಗರಬಾವಿಯಿಂದ ತಮಿಳುನಾಡಿಗೆ ತೆರಳುತ್ತಿದ್ದ ಕಾರನ್ನು ನೈಸ್ ರಸ್ತೆ ಟೋಲ್ ಬಳಿ ತಡೆದು ದಾಳಿ ನಡೆಸಿದ್ದರು. ಈ ವೇಳೆ ಸುಮಾರು 1 ಕೋಟಿ 5 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು.ಆದರೆ ಈ ದಾಳಿ ತಮ್ಮ ಪೊಲೀಸ್ ವ್ಯಾಪ್ತಿಯನ್ನು ಮೀರಿ ನಡೆಸಲಾಗಿದೆವೇ…?
ಪತ್ತೆಯಾದ ಹಣದ ಮೊತ್ತದಲ್ಲಿ ವ್ಯತ್ಯಾಸವಿದೆಯೇ?
ಸೀಜ್ ಮಾಡಿದ ಹಣದಲ್ಲಿ ಏನಾದರೂ ಮಿಸ್ ಆಗಿದೆಯೇ..?
ಪ್ರಕರಣದಲ್ಲಿ ಯಾವುದೇ ಪೊಲೀಸ್ ಅಧಿಕಾರಿಗಳ ಪಾತ್ರವಿದೆಯೇ..? ಎಂಬ ಹಲವು ಗಂಭೀರ ಪ್ರಶ್ನೆಗಳನ್ನು ನಗರ ಪೊಲೀಸ್ ಆಯುಕ್ತರು ಎತ್ತಿದ್ದಾರೆ.ಸದ್ಯ ಇನ್‌ಸ್ಪೆಕ್ಟರ್ ರವಿ ನೀಡಿದ ದೂರಿನ ಆಧಾರದಲ್ಲಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಣದ ಒಂದು ಭಾಗ ಮಿಸ್ ಆಗಿರುವ ಆರೋಪವೂ ಕೇಳಿಬರುತ್ತಿದೆ. ಈ ಹಿನ್ನಲೆಯಲ್ಲಿ, ಹಳೆಯ ಕೊಲೆ ಪ್ರಕರಣವನ್ನು ನೆಪಮಾಡಿಕೊಂಡು ಇನ್‌ಸ್ಪೆಕ್ಟರ್ ರವಿಯನ್ನು ಅಮಾನತುಗೊಳಿಸಲಾಯಿತೇ ಎಂಬ ಶಂಕೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

