ಬೆಂಗಳೂರು: ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಗೋವಿಂದರಾಜು ಟ್ರಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ದೊರೆತಿದೆ. ಟ್ರಾಪ್ ಕಾರ್ಯಾಚರಣೆ ವೇಳೆ ಲೋಕಾಯುಕ್ತ ಪೊಲೀಸರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಹಿರಿಯ ವಕೀಲ ಪ್ರಶಾಂತ್ ಮೆತಲ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಟ್ರಾಪ್ ಕಾರ್ಯಾಚರಣೆ ವೇಳೆ ನಿಯಮಗಳಿಗೆ ವಿರುದ್ಧವಾಗಿ ವೀಡಿಯೋ ಚಿತ್ರೀಕರಣ ನಡೆಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಲಂಚಮುಕ್ತ ಸಮಾಜ ನಿರ್ಮಾಣಕ್ಕಾಗಿ ಲೋಕಾಯುಕ್ತ ಮಾಡುತ್ತಿರುವ ಕೆಲಸ ಶ್ಲಾಘನೀಯವಾದರೂ, ಈ ಪ್ರಕರಣದಲ್ಲಿ ಲೋಕಾಯುಕ್ತ ಸಿಬ್ಬಂದಿ ಮತ್ತು ಅಧಿಕಾರಿಗಳು ಕಾನೂನು ಪಾಲನೆ ಮಾಡಿಲ್ಲ ಎಂದು ಆರೋಪಿಸಲಾಗಿದೆ. ಟ್ರಾಪ್ ಕಾರ್ಯಾಚರಣೆ ವೇಳೆ ಹೋಮ್ ಗಾರ್ಡ್ ಒಬ್ಬರು ಸೆಲ್ಫಿ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ರೀತಿಯ ವೀಡಿಯೋ ಚಿತ್ರೀಕರಣ ಹಾಗೂ ಪ್ರಸಾರಕ್ಕೆ ಅವರಿಗೆ ಯಾರು ಅನುಮತಿ ನೀಡಿದರು ಎಂಬ ಪ್ರಶ್ನೆಯನ್ನು ಕೂಡ ದೂರಿನಲ್ಲಿ ಎತ್ತಲಾಗಿದೆ. ವೈರಲ್ ಆದ ವೀಡಿಯೋದಿಂದ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರ ಕುಟುಂಬಕ್ಕೆ ತೀವ್ರ ಮಾನಸಿಕ ನೋವುಂಟಾಗಿದೆ. ಅವರ ಮಕ್ಕಳು ಶಾಲೆಗೆ ಹೋಗಲು ಸಹ ಸಾಧ್ಯವಾಗುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆ ಗೋವಿಂದರಾಜು ಅವರು ಲೋಕಾಯುಕ್ತ ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಚಿಂತಿಸುತ್ತಿದ್ದಾರೆ ಎಂದು ವಕೀಲ ಪ್ರಶಾಂತ್ ಮೆತಲ್ ತಿಳಿಸಿದ್ದಾರೆ. ಈ ಪ್ರಕರಣದ ಕುರಿತು ಲೋಕಾಯುಕ್ತ ಪೊಲೀಸರು ಸಮಗ್ರ ತನಿಖೆ ನಡೆಸಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

