ಬೆಳಗಾವಿ : ಇಲ್ಲಿನ ಪ್ರಾಥಮಿಕ ಭೂ ಅಭಿವೃದ್ಧಿ(ಪಿಎಲ್ ಡಿ) ಬ್ಯಾಂಕ್ ಮುಖ್ಯಸ್ಥರ ಹುದ್ದೆ ಚುನಾವಣೆಗೆ ಸಂಬಂಧಿಸಿದಂತೆ ಜಾರಕಿಹೊಳಿ ಸೋದರರು ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ನಡೆದ ಕಲಹ, ಮನಸ್ತಾಪ, ಕಿತ್ತಾಟಗಳಿಂದ ಸಮ್ಮಿಶ್ರ ಸರ್ಕಾರದ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ.
ಪಿಎಲ್ ಡಿ ಬ್ಯಾಂಕಿನ ಮುಖ್ಯಸ್ಥರ ಚುನಾವಣೆ ನಾಳೆ ನಡೆಯಲಿದ್ದು ರಾಜ್ಯ ರಾಜಕೀಯದಲ್ಲಿ ಪ್ರಭಾವ ಹೊಂದಿರುವ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಸೋದರರು, ಪಿಎಲ್ ಡಿ ಬ್ಯಾಂಕಿನ ಅಧ್ಯಕ್ಷ ಚುನಾವಣೆ ನಂತರ ತಮ್ಮ ಮುಂದಿನ ರಾಜಕೀಯ ನಡೆಯನ್ನು ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಜಾರಕಿಹೊಳಿ ಸೋದರರು ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ವಿವಾದ ಜಾಸ್ತಿಯಾಗಿದ್ದು ಅದು ರಾಜ್ಯ ರಾಜಕೀಯದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.
ಜಾರಕಿಹೊಳಿ ಸೋದರರಿಗೆ ತೀವ್ರ ಮುಜುಗರವನ್ನುಂಟುಮಾಡುವ ರೀತಿಯಲ್ಲಿ ಹೈಕೋರ್ಟ್ ಬ್ಯಾಂಕಿನ ನಿರ್ದೇಶಕರ ಮಂಡಳಿಗೆ ತಕ್ಷಣವೇ ಚುನಾವಣೆ ನಡೆಸಬೇಕೆಂದು ಆದೇಶ ನೀಡಿದೆ. ಜಾರಕಿಹೊಳಿ ಸೋದರರ ಪರವಾಗಿ ಸ್ಥಳೀಯ ಅಧಿಕಾರಿಗಳು ಇದುವರೆಗೆ ಪಿಎಲ್ ಡಿ ಬ್ಯಾಂಕಿನ ಮುಖ್ಯಸ್ಥರ ನೇಮಕಕ್ಕೆ ಸಂಬಂಧಿಸಿದಂತೆ ಚುನಾವಣೆಯನ್ನು ತಡೆಹಿಡಿದಿದ್ದರು ಎನ್ನಲಾಗುತ್ತಿದೆ. ಇದರಿಂದ ಆಕ್ರೋಶಗೊಂಡು ಲಕ್ಷ್ಮಿ ಹೆಬ್ಬಾಳ್ಕರ್ ಅಹೋರಾತ್ರಿ ತಹಶಿಲ್ದಾರ್ ಕಚೇರಿಯ ಎದುರು ಧರಣಿ ನಡೆಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಜಾರಕಿಹೊಳಿ ಆಪ್ತರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿ, ಹೈಕೋರ್ಟ್ ನ ತೀರ್ಪಿನಿಂದ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಗುಂಪಿನ ಮಧ್ಯೆ ಅಂತರ ಇನ್ನಷ್ಟು ಹೆಚ್ಚಾಗಲಿದ್ದು ಗಂಭೀರ ಪರಿಣಾಮಕ್ಕೆ ತಿರುಗುವ ಸಾಧ್ಯತೆಯಿದೆ ಎನ್ನುತ್ತಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸಚಿವ ಡಿ ಕೆ ಶಿವಕುಮಾರ್ ಬೆಂಬಲ ನೀಡಿದ್ದು ಜಾರಕಿಹೊಳಿ ಸೋದರರಿಗೆ ಇನ್ನಷ್ಟು ಅಸಮಾಧಾನವುಂಟುಮಾಡಿದೆ. ಮೂಲಗಳ ಪ್ರಕಾರ, ಉತ್ತರ ಕರ್ನಾಟಕದಲ್ಲಿ ಹಲವು ಶಾಸಕರ ಬೆಂಬಲ ಹೊಂದಿರುವ ಜಾರಕಿಹೊಳಿ ಸೋದರರು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ನ್ನು ತೊರೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಸಚಿವ ಡಿ ಕೆ ಶಿವಕುಮಾರ್ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಗೆ ಬಹಿರಂಗವಾಗಿ ಬೆಂಬಲ ನೀಡಿದ್ದು ಮಾತ್ರವಲ್ಲದೆ ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ಮಧ್ಯೆ ಪ್ರವೇಶಿಸಿರುವುದು ಜಾರಕಿಹೊಳಿ ಸೋದರರನ್ನು ಕೆರಳಿಸಿದೆ ಎನ್ನಲಾಗುತ್ತಿದೆ.
ಇವರಿಬ್ಬರ ಜಗಳ ಸಮ್ಮಿಶ್ರ ಸರ್ಕಾರಕ್ಕೆ ಕುತ್ತು ತರಲಿದೆಯೇ ಎಂದು ಕೇಳಿದರೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಉತ್ತರಿಸಿ, ಈಗಲೇ ನಾನು ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ನಾಳೆ ಚುನಾವಣೆ ಮುಗಿದು ಫಲಿತಾಂಶ ಘೋಷಣೆಯಾಗುವವರೆಗೆ ಎಲ್ಲವನ್ನೂ ಕಾದುನೋಡಬೇಕು ಎನ್ನುತ್ತಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





