ಚನ್ನಗಿರಿ: ತಾಲ್ಲೂಕಿನ ಹೊನ್ನೇಬಾಗಿ ಗ್ರಾಮದ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರೊಂದು ಇಬ್ಭಾಗವಾಗಿದೆ.ನಲ್ಲೂರು ಗ್ರಾಮದ ವಾಸಿ ನಯಾಜ್ ಖಾನ್ (33) ಎಂಬವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಲ್ಲೂರಿನಿಂದ ಹೊನ್ನೇಬಾಗಿ ಗ್ರಾಮದ ಕಡೆಗೆ ತೆರಳುತ್ತಿದ್ದ ಎರ್ಟಿಗಾ ಕಾರಿಗೆ ಚನ್ನಗಿರಿಯತ್ತ ಸಂಚರಿಸುತ್ತಿದ್ದ ಬ್ರೀಜಾ ಕಾರು ಮುಖಾಮುಖಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಮಾರುತಿ ಎರ್ಟಿಗಾ ಕಾರು ಸಂಪೂರ್ಣ ಜಖಂಗೊಂಡಿದ್ದರೆ, ಬ್ರೀಜಾ ಕಾರು ಎರಡು ಭಾಗವಾಗಿ ತುಂಡರಿಸಿ ಬಿದ್ದಿದೆ. ಕಾರುಗಳು ಅತ್ಯಂತ ವೇಗವಾಗಿ ಸಂಚರಿಸುತ್ತಿದ್ದುದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ಅಪಘಾತ ಸಂಭವಿಸಿದೆ. ರಾಜ್ಯ ಹೆದ್ದಾರಿಯಲ್ಲಿ ಒಂದು ಗಂಟೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಡಿವೈಎಸ್‌ಪಿ ರುದ್ರಪ್ಪ ಎಸ್. ಉಜ್ಜನಕೊಪ್ಪ ಹಾಗೂ ಇನ್‌ಸ್ಪೆಕ್ಟರ್ ಕೆ.ಎನ್. ರವೀಶ್ ಸ್ಥಳಕ್ಕೆ ಭೇಟಿ ನೀಡಿ ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು. ಎಸ್‌ಪ ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

