ನಕಲಿ ಆಭರಣ ಮಾರಾಟ ಮಾಡುವ ನೆಪದಲ್ಲಿ ಆರು ಮಹಿಳೆಯರ ತಂಡವು ಯಶವಂತಪುರದ ವಸತಿ ಸಮುಚ್ಚಯದ ನೇಪಾಳದ ಭದ್ರತಾ ಸಿಬ್ಬಂದಿ ಮನೆಯಲ್ಲಿ ₹20 ಸಾವಿರ ನಗದು ಹಾಗೂ ಚಿನ್ನಾಭರಣ ಕಳವು ಮಾಡಿ, ಪರಾರಿಯಾಗಿದೆ. ಭದ್ರತಾ ಸಿಬ್ಬಂದಿಯ ದೂರು ಆಧರಿಸಿ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯಶವಂತಪುರ ಪ್ರದೇಶದ ಗೋಲ್ಡನ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಉತ್ತರ ಕರ್ನಾಟಕ ಶೈಲಿಯ ಕೃತಕ ಆಭರಣಗಳನ್ನು ಮಾರಾಟದ ನೆಪದಲ್ಲಿ ಮಹಿಳೆಯರು ಅಪಾರ್ಟ್‌ಮೆಂಟ್‌ಗೆ ಪ್ರವೇಶಿಸಲು ಯತ್ನಿಸಿದ್ದರು. ಆದರೆ, ಭದ್ರತಾ ಸಿಬ್ಬಂದಿ ಅವರನ್ನು ಒಳಗೆ ಬಿಡಲು ನಿರಾಕರಿಸಿದ್ದಾರೆ. ಈ ಪೈಕಿ ಇಬ್ಬರು ಮಹಿಳೆಯರು ಅವರ ಗಮನ ಬೇರೆಡೆ ಸೆಳೆದಿದ್ದಾರೆ. ಆಗ, ಇನ್ನಿಬ್ಬರು ಒಳಗೆ ನುಗ್ಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ನೆಲ ಮಹಡಿಯಲ್ಲಿರುವ ಭದ್ರತಾ ಸಿಬ್ಬಂದಿ ಮನೆಗೆ ನುಗ್ಗಿ ನಗದು ಮತ್ತು ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ. ಈ ಘಟನೆಯ ದೃಶ್ಯಾವಳಿಗಳು ಅಪಾರ್ಟ್‌ಮೆಂಟ್‌ನ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

