ಶ್ರೀನಗರ: ಜಮ್ಮುವಿನ ಬಾಲಾಪರಾಧಿ ಗೃಹವೊಂದರಲ್ಲಿ ಕಾವಲು ಕಾಯುತ್ತಿದ್ದ ಇಬ್ಬರು ಪೊಲೀಸರ ಮೇಲೆ ಗುಂಡು ಹಾರಿಸಿ, ಇಬ್ಬರು ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ ಮೂವರು ಬಂಧಿತ ಕೈದಿಗಳು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಜಮ್ಮುವಿನ ಆರ್‌ಎಸ್ ಪುರ ಪ್ರದೇಶದಲ್ಲಿರುವ ಬಾಲಾಪರಾಧಿ ವೀಕ್ಷಣಾ ಗೃಹದೊಳಗೆ ಸೋಮವಾರ ಸಂಜೆ 5.05 ರ ಸುಮಾರಿಗೆ ಈ ಘಟನೆ ನಡೆದಿದೆ. ಕೈದಿಗಳು ಇಬ್ಬರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದು, ಮೂವರು ಕೈದಿಗಳು ಪರಾರಿಯಾಗಿದ್ದಾರೆ. ಪರಾರಿಯಾದವರಲ್ಲಿ ಅಹ್ಸಾನ್ ಅನ್ವರ್ ಮತ್ತು ಮೊಹಮ್ಮದ್ ಸನಾವುಲ್ಲಾ ಎಂಬ ಪಾಕಿಸ್ತಾನಿ ಪ್ರಜೆಗಳು ಎಂದು ಗುರುತಿಸಲಾಗಿದೆ. ಮೂರನೇ ಕೈದಿಯನ್ನು ಜಮ್ಮುವಿನ ಆರ್‌ಎಸ್ ಪುರ ನಿವಾಸಿ ಕರಂಜಿತ್ ಸಿಂಗ್ ಅಲಿಯಾಸ್ ಗುಗ್ಗಾ ಎನ್ನಲಾಗಿದೆ. ಗುಂಡಿನ ದಾಳಿಯಿಂದ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ವಿನಯ್ ಕುಮಾರ್ ಮತ್ತು ಪ್ರವೀಣ್ ಕುಮಾರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಳಿಕ ಪೊಲೀಸರು, ಅರೆಸೈನಿಕ ಪಡೆಗಳು ಹಾಗೂ ಪೊಲೀಸ್ ಅಧಿಕಾರಿಗಳು ಬಾಲಾಪರಾಧಿ ಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇನ್ನೂ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನು ಪತ್ತೆ ಹಚ್ಚಲು ವ್ಯಾಪಕ ಶೋಧ ಆರಂಭಿಸಿದ್ದಾರೆ. ಜೊತೆಗೆ ಬಾಲಾಪರಾಧಿ ಗೃಹಕ್ಕೆ ಬಂದೂಕುಗಳು ಹೇಗೆ ಬಂದವು ಎಂಬುದನ್ನು ಕಂಡು ಹಿಡಿಯಲು ಸಹ ತನಿಕೆ ನಡೆಸಿದ್ದಾರೆ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

