ಕೊಪ್ಪಳ: ಊರಿಗೆ ಬಂದಿದ್ದ ಗರ್ಭಿಣಿ ಸಹೋದರಿಗೆ ಕೊಡಲಿಯಿಂದ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಕೊಪ್ಪಳ ತಾಲೂಕಿನ ಹಂದ್ರಾಳ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ಮೀನಾಕ್ಷಿ, ಚಿತ್ತಾಪುರದ ಉದಯಕುಮಾರ ಒಂದುವರೆ ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮನೆಯ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ ಜೋಡಿ ಕೊಪ್ಪಳ ಬಿಟ್ಟು ಬೆಂಗಳೂರಿನಲ್ಲಿ ಸಂಸಾರ ನಡೆಸುತ್ತಿದ್ದರು. ಇಂದು ಗ್ರಾಮಕ್ಕೆ ಸಹೋದರಿ ಮೀನಾಕ್ಷಿ ಬಂದಿದ್ದಾಳೆ. ತಂಗಿ ಬಂದ ವಿಷಯ ತಿಳಿದ ಅಣ್ಣ ಮಂಜುನಾಥ್, ಮದುವೆ ಮನೆಗೆ ಕುಡಿದುಕೊಂಡು ಬಂದು ಗರ್ಭಿಣಿಯಾಗಿರುವ ಮೀನಾಕ್ಷಿ ಮೇಲೆ ಕೊಡಲಿಯಿಂದ ಬರ್ಬರವಾಗಿ ಹಲ್ಲೆ ಮಾಡಿದ್ದಾನೆ. ಕೊಡಲಿಯಿಂದ ತಲೆ, ಕೈ ಹಾಗೂ ಬೆನ್ನಿನ ಭಾಗಕ್ಕೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ. ಸದ್ಯ ಭೀಕರವಾಗಿ ಗಾಯಗೊಂಡು ಸಹೋದರಿ ಮೀನಾಕ್ಷಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಹಲ್ಲೆಗೊಳಗಾದ ಮೀನಾಕ್ಷಿ ಮಾವ ಮಾತನಾಡಿ, ನಮ್ಮ ಸೊಸೆಯ ಮೇಲೆ ಹಲ್ಲೆಯಾಗಿದೆ, ನಮಗೆ ನ್ಯಾಯಬೇಕೆಂದು ಉದಯಕುಮಾರ ತಂದೆ ಶಂಕ್ರಪ್ಪ ಆಗ್ರಹಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

