ಇಲ್ಲಿನ ಶಕ್ತಿನಗರದಲ್ಲಿ ಮದುವೆ ಅಂಗವಾಗಿ ಡಿಜೆ ಹಚ್ಚಿ ಸಂಭ್ರಮಿಸುವಾಗ ಯುವಕರಿಬ್ಬರು ಕೈಯಲ್ಲಿ ಮಾರಾಕಾಸ್ತ್ರ ಹಿಡಿದು ನೃತ್ಯ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ಅರಿಸಿನ ಶಾಸ್ತ್ರ ಸಮಾರಂಭದಲ್ಲಿ ರಾಜಕೀಯ ಮುಖಂಡರೊಬ್ಬರು ಕೈಯಲ್ಲಿ ಪಿಸ್ತೂಲ್ ಹಿಡಿದು ಕುಣಿದ ರೀಲ್ಸ್ ಮಾಡಿದ ಪ್ರಕರಣ ಸದ್ದು ಮಾಡಿದ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ.ಫೆಬ್ರುವರಿ 22ರಂದು ತುಷಾರ್ ಎಂಬ ಯುವಕನ ಮದುವೆ ಕಲಬುರಗಿಯ ಎಂ.ಜಿ. ರಸ್ತೆಯ ಕಲ್ಯಾಣ ಮಂಟಪವೊಂದರಲ್ಲಿ ನಡೆದಿತ್ತು. ಅಂದು ಸಂಜೆ ಶಕ್ತಿನಗರದ ಆತನ ಮನೆ ಹತ್ತಿರ ಸಂಭ್ರಮಾಚರಣೆ ನಡೆಯುತ್ತಿತ್ತು. ಈ ವೇಳೆ ‘ಮೈಂ ಹೂಂ ಡಾನ್’ ಹಾಡಿಗೆ ಸಂಜಯ್ ಹಾಗೂ ರಾಜವರ್ಧನ್ ಎಂಬುವವರು ಕೈಯಲ್ಲಿ ಹರಿತವಾದ ಚಾಕು ಮತ್ತು ತಲ್ವಾರ್ ಹಿಡಿದು ಸಾರ್ವಜನಿಕರಿಗೆ ಭಯ-ಭೀತಿ ಹುಟ್ಟಿಸುವ ರೀತಿಯಲ್ಲಿ ನೃತ್ಯ ಮಾಡಿದ್ದರು. ಇದಕ್ಕೆ ತುಷಾರ್ ಪ್ರಚೋದನೆ ಇತ್ತು’ ಎನ್ನಲಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಅಶೋಕನಗರ ಠಾಣೆ ಪೊಲೀಸರು ಸ್ವಯಂ ಪ್ರೇರಿತವಾಗಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಬಸವನಗರದ ರಾಜವರ್ಧನ್ ಸಂಗವಾರ (31), ಸಂಜಯ ಗಾಯಕವಾಡ್ (23) ಹಾಗೂ ತುಷಾರ್ ಗಾಯಕವಾಡ್ (24) ಬಂಧಿತರು.
bigtvnews | Hubli Dharwad News | Kannada News | Karnataka News Hubli News | News In Hubli | Local news

