ಜಯಪುರ(ಮೈಸೂರು ಜಿಲ್ಲೆ): ‘ಆರು ತಿಂಗಳಿಂದ ವೇತನ ಸಿಕ್ಕಿಲ್ಲ’ವೆಂದು ಆರೋಪಿಸಿ ಇಲ್ಲಿನ ಹಾರೋಹಳ್ಳಿ ಗ್ರಾಮ ಪಂಚಾಯಿತಿಯ ನೀರುಗಂಟಿ ರಾಮಚಂದ್ರಮೂರ್ತಿ ಅವರು ಭಾನುವಾರ ರಾತ್ರಿ ಪಂಚಾಯಿತಿ ಕಚೇರಿ ಮುಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರು ರಕ್ಷಿಸಿದ್ದಾರೆ. ಸೋಮವಾರ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ‘ಕಂದಾಯ ವಸೂಲಿಗೆ ನಿಗದಿ ಮಾಡಿದ್ದ ಗುರಿ ಮುಟ್ಟಲು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದೆವು. ಆದರೂ ಸಂಬಳ ಕೊಡದೆ ಪಿಡಿಓ ಮತ್ತು ಕಾರ್ಯದರ್ಶಿಯು ಸತಾಯಿಸುತ್ತಿದ್ದಾರೆ. ಅಂಗವಿಕಲನಾದ ನನಗೆ ಮಾತ್ರೆ, ಔಷಧಿ ಖರೀದಿಸಲು ತೊಂದರೆಯಾಗಿದೆ. ಹೀಗಾಗಿ ನೊಂದು ಆತ್ಮಹತ್ಯೆಗೆ ಯತ್ನಿಸಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ನೀರುಗಂಟಿಗಳಿಗೆ ಆರು ತಿಂಗಳಿಂದ ಸಂಬಳ ನೀಡದ ಬಗ್ಗೆ ಮೈಸೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆವು. ಸಂಬಳ ನೀಡಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಆತ್ಮಹತ್ಯೆಗೆ ಯತ್ನಿಸಿದ ನೀರುಗಂಟಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ’ ಎಂದು ಪಿಡಿಓ ಕೆ.ಎಸ್ ಗಣೇಶ್ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

