ಹಾವೇರಿ: ಇಟ್ಟಿಗೆ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅಪಘಾತದಲ್ಲಿ ಚಾಲಕನೊಬ್ಬ ಸಾವನ್ನಪ್ಪಿರುವ ದುರ್ಘಟನೆ ಹಾವೇರಿ ಜಿಲ್ಲೆಯ ಮರೋಳ ಗ್ರಾಮದಲ್ಲಿ ನಡೆದಿದೆ. ಹಾವೇರಿ ತಾಲೂಕಿನ ಗುತ್ತಲ ತಾಂಡಾ ನಿವಾಸಿ ದೇವರಾಜ್ ಲಮಾಣಿ (26) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೃತ ದೇವರಾಜ್ ಬೆಳಿಗ್ಗೆ ಸುಮಾರು ಎರಡೂವರೆ ಸಾವಿರ ಇಟ್ಟಿಗೆಗಳನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಮರೋಳ ಗ್ರಾಮಕ್ಕೆ ಸಾಗಿಸುತ್ತಿದ್ದ ವೇಳೆ, ಏಕಾಏಕಿ ಟ್ರ್ಯಾಕ್ಟರ್ ಎಂಜಿನ್ ಮೇಲೆ ಎದ್ದು ಟ್ರೇಲರ್ ಮತ್ತು ವಾಹನದ ಮಧ್ಯೆ ಸಿಲುಕಿಕೊಂಡಿದ್ದಾನೆ. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಗುತ್ತಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

