ಸಾಲವಾಗಿ ಪಡೆದಿದ್ದ ಹಣವನ್ನು ಮರಳಿ ನೀಡುವ ನೆಪದಲ್ಲಿ ಮನೆಗೆ ಬಂದು ಬಳಿಕ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಮಹಿಳೆಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತಳನ್ನು ಶೃತಿ @ ವಿಶ್ಮೀತ ಮತ್ತು ಈ ಕೃತ್ಯಕ್ಕೆ ಸಹಕರಿಸಿದ ಪ್ರದೀಪ್ ಎಂದು ಗುರುತಿಸಲಾಗಿದೆ. ಪುಣ್ಯಶ್ರೀ ಅವರ ತಂದೆಯಿಂದ ಶೃತಿ ಅಲಿಯಾಸ್ ವಿಶ್ಮೀತ (37) ಎಂಬಾಕೆ ಸುಮಾರು ₹6 ಲಕ್ಷ ಸಾಲ ಪಡೆದಿದ್ದರು. ಹಣ ಹಿಂತಿರುಗಿಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ, ಏಪ್ರಿಲ್ 7 ರಂದು ಹಣ ನೀಡುವ ನೆಪದಲ್ಲಿ ಪುಣ್ಯಶ್ರೀ ಅವರ ಮನೆಗೆ ಶೃತಿ ಬಂದಿದ್ದರು. ಮನೆಯವರು ಕೆಲಸಕ್ಕೆ ತೆರಳಿದ ಸಮಯ ನೋಡಿ, ಆರೋಪಿ ಶೃತಿ ಕಪಾಟಿನ ಬೀಗದ ಕೀ ಬಳಸಿ ಸುಮಾರು 62 ½ ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಇದರ ಮೌಲ್ಯ ಸುಮಾರು ₹5 ಲಕ್ಷ ಎಂದು ಅಂದಾಜಿಸಲಾಗಿದೆ. ರಾತ್ರಿ ವೇಳೆ ಪುಣ್ಯಶ್ರೀ ಅವರು ಮನೆಗೆ ಬಂದು ಕಪಾಟು ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದ್ದು, ಮನೆಯವರು ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿ ಶೃತಿ ಹಾಗೂ ಈ ಕೃತ್ಯಕ್ಕೆ ಸಹಕರಿಸಿದ ಪ್ರದೀಪ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಕಳವಾದ ಎಲ್ಲಾ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಸುಳ್ಯ ಪೊಲೀಸ್ ಠಾಣೆಯಲ್ಲಿ ಹೊಸ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

