ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸವಾರರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಧರ್ಮಸ್ಥಳ ಗ್ರಾಮದ ಬೊಳಿಯಾರ್ ಎಂಬಲ್ಲಿ ನಡೆದಿದೆ. ಧರ್ಮಸ್ಥಳ ಗ್ರಾಮದ ದೊಂಡೊಲೆ ನಿವಾಸಿ ಅಶೋಕ್ ಭಟ್ (65) ಗಾಯಗೊಂಡ ಸವಾರ. ಇಂದು ಮುಂಜಾನೆ ಸುಮಾರು 6:30ರ ವೇಳೆಗೆ ಅಶೋಕ್ ಭಟ್ ಅವರು ದ್ವಿಚಕ್ರ ವಾಹನದಲ್ಲಿ ಮುದ್ದಿಗೆ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಡುಗೆ ಕೆಲಸಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಬೊಳಿಯಾರ್ ಎಂಬಲ್ಲಿ ಇನೋವಾ ಕಾರು ಮತ್ತು ಇವರ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಅಶೋಕ್ ಭಟ್ ಅವರ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

