ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನಕಲಿ ಅಥವಾ ಅಮಾನ್ಯ ಪಿಎಚ್‌ಡಿ ಪ್ರಮಾಣಪತ್ರ ಸಲ್ಲಿಸಿ ಉದ್ಯೋಗ ಪಡೆದಿದ್ದ 249 ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ವಜಾಗೊಳಿಸಲು ಕಾಲೇಜು ಶಿಕ್ಷಣ ಇಲಾಖೆ ಆದೇಶಿಸಿದೆ. ಜೊತೆಗೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಭವಿಷ್ಯದ ನೇಮಕಾತಿಗಳಿಂದ ಶಾಶ್ವತವಾಗಿ ಕಪ್ಪುಪಟ್ಟಿಗೆ ಸೇರಿಸಲು ಸೂಚಿಸಲಾಗಿದೆ. 2025-26ನೇ ಸಾಲಿನ ನೇಮಕಾತಿ ವೇಳೆ ದಾಖಲೆಗಳ ಪರಿಶೀಲನೆಯಲ್ಲಿ ವಿಶ್ವವಿದ್ಯಾಲಯಗಳು 249 ಪಿಎಚ್‌ಡಿ ಪ್ರಮಾಣಪತ್ರಗಳು ನಕಲಿ ಅಥವಾ ಅಮಾನ್ಯವಾಗಿವೆ ಎಂದು ದೃಢಪಡಿಸಿವೆ. ಇದನ್ನು ಆಧರಿಸಿ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ವಜಾಗೊಂಡವರಲ್ಲಿ 148 ಮಂದಿ ಕಲ್ಯಾಣ ಕರ್ನಾಟಕ ಭಾಗದ ಕಾಲೇಜುಗಳಲ್ಲೇ ಕಾರ್ಯನಿರ್ವಹಿಸುತ್ತಿದ್ದರು. ಬೀದರ್‌ನ ಒಂದೇ ಸರ್ಕಾರಿ ಕಾಲೇಜಿನಲ್ಲಿ 19 ಮಂದಿ ನಕಲಿ ಪಿಎಚ್‌ಡಿ ಪ್ರಮಾಣಪತ್ರ ಹೊಂದಿದ್ದ ಪ್ರಕರಣವೂ ಬೆಳಕಿಗೆ ಬಂದಿದೆ. ಕೆಲ ವಿರಳ ಪ್ರಕರಣಗಳಲ್ಲಿ ಮರು ಪರಿಶೀಲನೆ ನಡೆಯುತ್ತಿದ್ದು, ಅಂತಿಮ ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

