ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸಿಂಸೆ ಗ್ರಾಮದಲ್ಲಿ ಕರೆದ ತಕ್ಷಣ ಬರಲಿಲ್ಲ ಎಂಬ ಕಾರಣಕ್ಕೆ ನೇಪಾಳ ಮೂಲದ ಕೆಫೆ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತ ಹರ್ಷ ಹಾಗೂ ಆತನ ಸ್ನೇಹಿತ ಶಶಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಬಾಬುರಾಮ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಾತ್ರಿ ವೇಳೆ ಕೆಫೆಯ ಹೊರಗೆ ನಿಂತಿದ್ದ ಆರೋಪಿಗಳು ಕಾರ್ಮಿಕನನ್ನು ಕರೆದಿದ್ದು, ಆತ ತಡವಾಗಿ ಬಂದಿದ್ದಕ್ಕೆ ಆಕ್ರೋಶಗೊಂಡು ಕೆಫೆಯೊಳಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸೆಲ್ಫ್ ಸರ್ವೀಸ್ ವ್ಯವಸ್ಥೆಯ ಕೆಫೆಯಾಗಿದ್ದರೂ, ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆತನ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿ ರಕ್ತಸ್ರಾವವಾಗಿದೆ. ಘಟನೆಯ ವೇಳೆ ಮಧ್ಯ ಪ್ರವೇಶಿಸಿದ ಕೆಫೆ ಮಾಲೀಕರು 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಮತ್ತಷ್ಟು ಉದ್ರಿಕ್ತಗೊಂಡ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

