ಭಾನುವಾರವೇ ದಿಢೀರ್ ಅಧಿಕಾರಿಗಳ ವರ್ಗಾವಣೆ..! ಐಎಎಸ್–ಐಪಿಎಸ್ ಅಧಿಕಾರಿಗಳ ಸಾಮೂಹಿಕ ಬದಲಾವಣೆ ಬೆಂಗಳೂರು:
ರಾಜ್ಯದ ಆಡಳಿತ ಮತ್ತು ಪೊಲೀಸ್ ವಲಯದಲ್ಲಿ ಭಾನುವಾರವೇ ಅಚ್ಚರಿಯ ಬೆಳವಣಿಗೆ ನಡೆದಿದೆ. ಸಾಮಾನ್ಯವಾಗಿ ಕೆಲಸದ ದಿನಗಳಲ್ಲಿ ನಡೆಯುವ ಹಿರಿಯ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯನ್ನು, ಕರ್ನಾಟಕ ಸರ್ಕಾರ ಈ ಬಾರಿ ರಜಾದಿನದಲ್ಲೇ ನಡೆಸಿ ಹಲವು ಹಿರಿಯ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ದಿಢೀರ್ ಆಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸರ್ಕಾರದ ಈ ನಡೆ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ..
ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳು ನಡೆದಿದ್ದು, ಹಿರಿಯ ಐಪಿಎಸ್ ಅಧಿಕಾರಿ ಡಾ. ಪ್ರಣಬ್ ಮೊಹಂತಿ ಅವರನ್ನು ಅಪರಾಧ ತನಿಖಾ ಇಲಾಖೆ (CID) ವಿಶೇಷ ಘಟಕ ಹಾಗೂ ಆರ್ಥಿಕ ಅಪರಾಧಗಳ ವಿಭಾಗದ ಡಿಜಿಪಿಯಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಲಾಗಿದೆ. ಅದೇ ವೇಳೆ, ಡಾ. ಚಂದ್ರಗುಪ್ತ ಅವರನ್ನು ರಾಜ್ಯ ಗುಪ್ತಚರ ವಿಭಾಗ (Intelligence)ದ ಐಜಿಪಿಯಾಗಿ ಪ್ರಮುಖ ಜವಾಬ್ದಾರಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.ಇನ್ನೊಂದೆಡೆ, ಆಡಳಿತ ವಲಯದಲ್ಲೂ ಹಲವು ಹಿರಿಯ ಐಎಎಸ್ ಅಧಿಕಾರಿಗಳಿಗೆ ಹೊಸ ಜವಾಬ್ದಾರಿಗಳನ್ನು ನೀಡಲಾಗಿದೆ. ಹಿರಿಯ ಐಎಎಸ್ ಅಧಿಕಾರಿ ಅಂಜುಮ್ ಪರ್ವೇಜ್ ಅವರನ್ನು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ (ACS) ನೇಮಿಸಲಾಗಿದೆ..
ಅದೇ ರೀತಿ, ಮುನೀಶ್ ಮೌನ್ಸಿಲ್ ಅವರಿಗೆ ಮುಖ್ಯಮಂತ್ರಿಗಳ ಸಚಿವಾಲಯದ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ದೀಪಾ ಚೋಳನ್ ಅವರನ್ನು ಸಾರಿಗೆ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದ್ದು, ಕಾವೇರಿ ಬಿ.ಬಿ. ಅವರನ್ನು ನಗರಾಭಿವೃದ್ಧಿ ಇಲಾಖೆಗೆ ನಿಯೋಜಿಸಲಾಗಿದೆ.ಇವರೊಂದಿಗೆ ಡಾ. ವೆಂಕಟೇಶ್ ಎಂ.ವಿ. (ಸಹಕಾರ ಸಂಘಗಳ ನಿಬಂಧಕರು) ಹಾಗೂ ಡಾ. ಸೆಲ್ವಮಣಿ ಆರ್. (ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು) ಸೇರಿದಂತೆ ಇನ್ನೂ ಹಲವು ಅಧಿಕಾರಿಗಳ ಸ್ಥಾನಪಲ್ಲಟ ನಡೆದಿದೆ..
ಸಾಮಾನ್ಯವಾಗಿ ವಾರದ ಕೆಲಸದ ದಿನಗಳಲ್ಲಿ ನಡೆಯುವ ಇಂತಹ ಮಹತ್ವದ ವರ್ಗಾವಣೆ ಪ್ರಕ್ರಿಯೆಯನ್ನು, ಸರ್ಕಾರ ಭಾನುವಾರವೇ ಅಧಿಸೂಚನೆ ಹೊರಡಿಸಿ “ತಕ್ಷಣದಿಂದಲೇ ಜಾರಿಗೆ ಬರುವಂತೆ” ಆದೇಶಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಆಡಳಿತ ಯಂತ್ರಕ್ಕೆ ಇನ್ನಷ್ಟು ವೇಗ ನೀಡುವ ಉದ್ದೇಶದಿಂದಲೇ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ..
ಭಾನುವಾರವೇ ನಡೆದ ಈ ದಿಢೀರ್ ವರ್ಗಾವಣೆ, ರಾಜ್ಯದ ಆಡಳಿತ ಹಾಗೂ ಪೊಲೀಸ್ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

