ವಿವಾಹಿತ ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ಯುವಕನನ್ನು ಮಹಿಳೆ, ಆಕೆಯ ಪತಿ ಹಾಗೂ ಸಹೋದರ ಸೇರಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬಸವನಗೌಡನ್ ಕೊಲೆಯಾದ ಯುವಕನಾಗಿದ್ದು, ಶ್ವೇತಾ, ಆಕೆಯ ಪತಿ ದೊಡ್ಡ ಬಸವನಗೌಡ ಹಾಗೂ ಸಹೋದರ ವಿಜಯ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ವರ್ಷಗಳ ಹಿಂದೆ ನಡೆದ ಮದುವೆ ಕಾರ್ಯಕ್ರಮದಲ್ಲಿ ಶ್ವೇತಾಗೆ ಪರಿಚಯವಾಗಿದ್ದ ಬಸವನಗೌಡನ್, ಬಳಿಕ ನಿರಂತರವಾಗಿ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಕುರಿತು ಹಲವು ಬಾರಿ ಎಚ್ಚರಿಕೆ ನೀಡಿದರೂ ವರ್ತನೆ ಬದಲಿಸದ ಕಾರಣ ಶ್ವೇತಾ ಈ ವಿಷಯವನ್ನು ಪತಿ ಮತ್ತು ಸಹೋದರನಿಗೆ ತಿಳಿಸಿದ್ದಳು. ಜೂನ್ 7ರಂದು ಬಸವನಗೌಡನನ್ನು ಕರೆಸಿಕೊಂಡು ಹಗ್ಗದಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿ, ಬಳಿಕ ಶವವನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಬೆಂಕಿ ಹಚ್ಚಿರುವ ಆರೋಪ ಕೇಳಿಬಂದಿದೆ. ಪ್ರಕರಣದ ತನಿಖೆ ನಡೆಸಿದ ಮೋಕಾ ಠಾಣೆ ಪೊಲೀಸರು ಮೂವರನ್ನೂ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

