ಮಂಡ್ಯ : ಮಳವಳ್ಳಿ ತಾಲ್ಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ 34 ವರ್ಷದ ಮಹೇಶ ಎಂಬ ಯುವಕನನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆಗೈಯಲಾಗಿದೆ. ಮಂಗಳವಾರ ರಾತ್ರಿ ತಂಗಿ ಮನೆಯಲ್ಲಿ ಊಟ ಮಾಡುತ್ತಿದ್ದ ಮಹೇಶನನ್ನು ರಾಜೇಶ್ ಎಂಬಾತ ಫೋನ್ ಮಾಡಿ ಮಾರಿ ಗುಡಿ ಬಳಿ ಕರೆಸಿಕೊಂಡು, ನಂತರ ಗ್ರಾಮದ ಹೊರವಲಯದಲ್ಲಿ ಈ ಕೃತ್ಯ ಎಸಗಿದ್ದಾನೆ. ಕೊಲೆಯ ಬಳಿಕ ಆರೋಪಿಗಳು ಶವವನ್ನು ಬೈಕ್ ಮಧ್ಯೆ ಕೂರಿಸಿಕೊಂಡು ಮಳವಳ್ಳಿಯಿಂದ ಕೊಳ್ಳೇಗಾಲ ರಸ್ತೆ ಕಡೆಗೆ ಸಾಗಿಸುತ್ತಿದ್ದಾಗ, ಕೆಇಬಿ ಕಚೇರಿ ಬಳಿ ಬೈಕ್ ಆಫ್ ಆಗಿದೆ. ಬೈಕ್‌ನಲ್ಲಿದ್ದ ವ್ಯಕ್ತಿ ರಕ್ತಸಿಕ್ತವಾಗಿರುವುದನ್ನು ಗಮನಿಸಿದ ಸ್ಥಳೀಯ ಯುವಕರು ತಕ್ಷಣ ಅವರನ್ನು ಪ್ರಶ್ನಿಸಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿ ವೈದ್ಯರು ಮಹೇಶ ಮೃತಪಟ್ಟಿರುವುದನ್ನು ಖಚಿತಪಡಿಸಿದ ತಕ್ಷಣ, ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮೃತನ ಸಹೋದರಿ ರತ್ನಮ್ಮ ನೀಡಿದ ದೂರಿನ ಮೇರೆಗೆ ಕಿರುಗಾವಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

