ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಬಂದೂಕು ಹಾಗೂ ಮಾರಕಾಸ್ತ್ರಗಳೊಂದಿಗೆ ಸಂಚರಿಸಿ ಆತಂಕ ಸೃಷ್ಟಿಸಿದ್ದ ಮೂವರನ್ನು ಮಲ್ಲಂದೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಏಳುನೂರು ಖಾನ್ ಕಾಫಿ ತೋಟದಲ್ಲಿ ಜೂನ್ 17, 21 ಮತ್ತು 22ರಂದು ಮಧ್ಯರಾತ್ರಿ ವೇಳೆ ಕೆಲವರು ಅಕ್ರಮವಾಗಿ ಪ್ರವೇಶಿಸಿ ಸಂಚರಿಸುತ್ತಿದ್ದರೆಂದು ತೋಟದ ಹಿರಿಯ ವ್ಯವಸ್ಥಾಪಕಿ ದಿವ್ಯ ಅವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮಲ್ಲಂದೂರು ಸಮೀಪದ ತೋಟದಮಕ್ಕಿ ಗ್ರಾಮದ ಪುಟ್ಟಸ್ವಾಮಿ, ಗಿರೀಶ್ ಮತ್ತು ರಮೇಶ್ ಅವರನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಕಾಡುಪ್ರಾಣಿಗಳ ಬೇಟೆಯ ಉದ್ದೇಶದಿಂದ ತೋಟಕ್ಕೆ ಬಂದಿದ್ದರೆಂದು ತಿಳಿದುಬಂದಿದೆ. ಹುಲಿ ಹಾಗೂ ಚಿರತೆಗಳ ಚಲನವಲನಗಳ ಮೇಲೆ ನಿಗಾ ಇಡಲು ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಬಂದೂಕು ಮತ್ತು ಮಾರಕಾಸ್ತ್ರಗಳನ್ನು ಹಿಡಿದು ಸಂಚರಿಸುತ್ತಿದ್ದ ದೃಶ್ಯಗಳು ಸೆರೆಯಾಗಿದ್ದು, ಅದರ ಆಧಾರದಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

