ಚಿತ್ರದುರ್ಗ: ಇಂಗಳದಾಳ್ ಲಂಬಾಣಿಹಟ್ಟಿ ಸಮೀಪ ಪತ್ತೆಯಾಗಿದ್ದ ಅನಾಮಧೇಯ ವ್ಯಕ್ತಿಯ ಭೀಕರ ಕೊಲೆ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇದಿಸಿದ್ದು, ಮೃತನ ಪತ್ನಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದ ನಿವಾಸಿ ಹಾಗೂ ಪರಶುರಾಂಪುರ ಸಮುದಾಯ ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ 38 ವರ್ಷದ ಶಿವಮೂರ್ತಿ ಜೂನ್ 26ರಂದು ಶಿವಮೊಗ್ಗಕ್ಕೆ ತೆರಳಿದ ಬಳಿಕ ನಾಪತ್ತೆಯಾಗಿದ್ದರು. ಬಳಿಕ ಅವರ ಕಾರು ಚನ್ನಗಿರಿ ಸಮೀಪ ಪತ್ತೆಯಾಗಿತ್ತು. ಜುಲೈ 1ರಂದು ಇಂಗಳದಾಳ್ ಲಂಬಾಣಿಹಟ್ಟಿ ಬಳಿಯ ಗುಡ್ಡದಲ್ಲಿ ಸುಟ್ಟ ಸ್ಥಿತಿಯಲ್ಲಿದ್ದ ಅನಾಮಧೇಯ ಶವ ಪತ್ತೆಯಾಗಿದ್ದು, ಬಳಿಕ ಅದು ಶಿವಮೂರ್ತಿಯದ್ದೇ ಎಂದು ಗುರುತಿಸಲಾಯಿತು. ಸಾಕ್ಷ್ಯ ನಾಶಪಡಿಸಲು ಶವಕ್ಕೆ ಬೆಂಕಿ ಹಚ್ಚಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಪ್ರಕರಣದ ತನಿಖೆ ಕೈಗೊಂಡ ವಿಶೇಷ ಪೊಲೀಸ್ ತಂಡ ಮೃತನ ಪತ್ನಿ ರೂಪಾ (ಸುಮತಿ), ನೂರ್ ಅಹಮದ್ ಅಲಿಯಾಸ್ ರಿಯಾಜ್, ಅಕ್ಷಯ್ ಅಲಿಯಾಸ್ ಅಚ್ಚು ಹಾಗೂ ಝಂಕಾರ್ ಅವರನ್ನು ಬಂಧಿಸಿದೆ. ಪ್ರಕರಣದ ಹಿಂದಿನ ಕಾರಣ ಮತ್ತು ಸಂಚಿನ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಅಲ್ಪಾವಧಿಯಲ್ಲೇ ಪ್ರಕರಣ ಭೇದಿಸಿದ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಬಹುಮಾನ ಘೋಷಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

