ಚಿತ್ರದುರ್ಗ: ಪತಿಯನ್ನು ಕೊಲೆ ಮಾಡಿ ಅಪಘಾತದಲ್ಲಿ ಮೃತಪಟ್ಟಂತೆ ನಾಟಕವಾಡಿದ್ದ ಪ್ರಕರಣವನ್ನು ಹೊಳಲ್ಕೆರೆ ಪೊಲೀಸರು ಭೇದಿಸಿದ್ದು, ಪತ್ನಿ ಕಾವ್ಯಾ, ಮಗ ಸಂತೋಷ ಹಾಗೂ ಪ್ರಿಯಕರ ತಿಪ್ಪೇಸ್ವಾಮಿ ಅವರನ್ನು ಬಂಧಿಸಿದ್ದಾರೆ. ಮೇ 8ರಂದು ಹೊಳಲ್ಕೆರೆ ತಾಲೂಕಿನ ಲೋಕದೊಳಲು ಗ್ರಾಮದ ವೀರೇಶಪ್ಪ ಗಾಯಗೊಂಡ ಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಮೃತಪಟ್ಟಿದ್ದರು. ಪತಿ ಎಲ್ಲಿಯೋ ಬಿದ್ದು ಗಾಯಗೊಂಡಿದ್ದಾರೆ ಎಂದು ಪತ್ನಿ ಕಾವ್ಯಾ ಹಾಗೂ ಮಗ ಸಂತೋಷ ಹೇಳಿದ್ದರು. ಆದರೆ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರಿಂದ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆಯಲ್ಲಿ ಕಾವ್ಯಾ ಕಳೆದ ಮೂರು ವರ್ಷಗಳಿಂದ ತಿಪ್ಪೇಸ್ವಾಮಿ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಈ ವಿಚಾರವಾಗಿ ಪತಿ ವೀರೇಶಪ್ಪ ಹಿಂಸೆ ನೀಡುತ್ತಿದ್ದ ಹಿನ್ನೆಲೆ ಕೊಲೆ ಸಂಚು ರೂಪಿಸಿದ್ದಾಗಿ ಬೆಳಕಿಗೆ ಬಂದಿದೆ. ಮೇ 8ರಂದು ಕಾವ್ಯಾ, ಮಗ ಸಂತೋಷ ಹಾಗೂ ತಿಪ್ಪೇಸ್ವಾಮಿ ಸೇರಿ ವೀರೇಶಪ್ಪನ ಹಣೆಗೆ ಅಡಿಕೆ ಕತ್ತಿಯಿಂದ ಹೊಡೆದು, ಬಳಿಕ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಅಪಘಾತದ ಕಥೆ ಕಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೊಳಲ್ಕೆರೆ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

