ರಾಮನಗರ: ಚನ್ನಪಟ್ಟಣದ ತಹಶೀಲ್ದಾರ್ ಬಿ.ಎನ್. ಗಿರೀಶ್ ಅವರಿಗೆ ಪ್ರಜ್ಞೆ ತಪ್ಪಿಸಿ, ಬೆತ್ತಲೆ ವಿಡಿಯೋ ಚಿತ್ರೀಕರಿಸಿ ₹10 ಲಕ್ಷಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ರೌಡಿಶೀಟರ್ ಅನುಷ್ ಶಿವಪ್ಪನನ್ನು ಚನ್ನಪಟ್ಟಣ ಟೌನ್ ಪೊಲೀಸರು ಬಂಧಿಸಿದ್ದಾರೆ. ಶೋಭರಾಜ್ ಹಾಗೂ ನವೀನ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಜೂನ್ 28ರಂದು ತಹಶೀಲ್ದಾರ್ ಅವರನ್ನು ಭೇಟಿ ಮಾಡಿದ ಆರೋಪಿಗಳು ಕುಡಿಯಲು ಹಣ್ಣಿನ ರಸ ನೀಡಿದ್ದು, ಬಳಿಕ ಅವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಈ ವೇಳೆ ವಿವಸ್ತ್ರಗೊಳಿಸಿ ವಿಡಿಯೋ ಸೆರೆಹಿಡಿದ ಆರೋಪಿಗಳು, ಚಿನ್ನದ ಸರ, ಉಂಗುರ ಹಾಗೂ ಬೆಳ್ಳಿಯ ಉಡುದಾರ ಕಳವು ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಸಿ ₹10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ, ಇಡೀ ರಾತ್ರಿ ಗೃಹಬಂಧನದಲ್ಲಿಟ್ಟು ಹಲ್ಲೆ ನಡೆಸಿರುವುದಾಗಿ ತಹಶೀಲ್ದಾರ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅನುಷ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಉಳಿದ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

