ಕೇರಳದಲ್ಲಿ ಬಸ್ ಕಂಡಕ್ಟರ್‌ಗೆ ಗನ್ ತೋರಿಸಿ ಸುಲಿಗೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿ 36 ವರ್ಷಗಳ ಬಳಿಕ ಮೈಸೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಧಿತನನ್ನು 66 ವರ್ಷದ ವಿ.ಕೆ. ಜೋಸ್ ಎಂದು ಗುರುತಿಸಲಾಗಿದ್ದು, ಈತ ತನ್ನ ಹೆಸರನ್ನು ‘ಶಿವಕುಮಾರ್’ ಎಂದು ಬದಲಾಯಿಸಿಕೊಂಡು ಮೈಸೂರಿನಲ್ಲಿ ನೆಲೆಸಿದ್ದ ಎಂದು ತಿಳಿದುಬಂದಿದೆ. ಕೇರಳದ ತಿರುವಂಬಾಡಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಜಾಮೀನು ರಹಿತ ವಾರಂಟ್ ಹೊರಡಿಸಿದ ಬಳಿಕ ಮೈಸೂರಿಗೆ ಪರಾರಿಯಾಗಿದ್ದ. ಇಲ್ಲಿ ಪೇಂಟಿಂಗ್ ಕೆಲಸ ಮಾಡಿಕೊಂಡು ಮಹಿಳೆಯೊಬ್ಬರನ್ನು ಮದುವೆಯಾಗಿ ಹಲವು ವರ್ಷಗಳಿಂದ ಬದುಕು ಸಾಗಿಸುತ್ತಿದ್ದ. ಇತ್ತೀಚಿನ ಕೌಟುಂಬಿಕ ಕಲಹದ ವೇಳೆ ಪತ್ನಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮನೆಗೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿ ರಿವಾಲ್ವರ್ ಪತ್ತೆಹಚ್ಚಿದರು. ವಿಚಾರಣೆ ವೇಳೆ 36 ವರ್ಷಗಳ ಹಿಂದಿನ ಸುಲಿಗೆ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕೇರಳ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

