ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ತೊಲಗಿ ಗ್ರಾಮದಲ್ಲಿ ಮನೆಯ ಹಿಂಭಾಗದ ಚರಂಡಿ ಮೂಲಕ ನೀರು ಹರಿಸುವ ವಿಚಾರವಾಗಿ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಅಮೀರ್ ಹುಸೇನ್ ಪಾಚಾಪುರ್ (48) ಮೃತಪಟ್ಟಿದ್ದು, ಅಶೋಕ್ ರಾಮಾ ಉಗುರುಕೋಡ್ (28) ಎಂಬ ಆರೋಪಿಯನ್ನು ನಂದಗಡ ಪೊಲೀಸರು ಘಟನೆ ನಡೆದ ಒಂದು ಗಂಟೆಯೊಳಗೆ ವಶಕ್ಕೆ ಪಡೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ಈ ವಿಚಾರವಾಗಿ ಭಿನ್ನಾಭಿಪ್ರಾಯವಿದ್ದು, ಮಂಗಳವಾರ ಬೆಳಗ್ಗೆ ನಡೆದ ಮಾತಿನ ಚಕಮಕಿ ವೇಳೆ ಆರೋಪಿ ಪಿಕಾಸಿಯಿಂದ ಹಲ್ಲೆ ನಡೆಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡ ಅಮೀರ್ ಹುಸೇನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ನಂದಗಡ ಪೊಲೀಸರು ಸ್ಥಳ ಮಹಜರು ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ತ್ವರಿತ ಕಾರ್ಯಾಚರಣೆ ಮೂಲಕ ಬಂಧಿಸಿ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

