ಬೆಂಗಳೂರು: ಮಧ್ಯರಾತ್ರಿ ಪ್ರೇಯಸಿ ಮನೆಗೆ ತೆರಳಿ ಬಾಗಿಲು ಬಡಿದಿದ್ದ ಯುವಕ, ಮನೆಯವರು ಹೊರಬರುತ್ತಿದ್ದಂತೆ ಭಯಗೊಂಡು ಪರಾರಿಯಾಗಲು ಯತ್ನಿಸುವ ವೇಳೆ ಮೊದಲ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಜೆ.ಪಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಾರಕ್ಕಿ ನಿವಾಸಿ ಮಹದೇವಸ್ವಾಮಿ (21) ಮೃತ ಯುವಕ. ಡೆಲಿವರಿ ಬಾಯ್ ಆಗಿದ್ದ ಆತ, ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆ.5ರಂದು ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ಮದ್ಯದ ಅಮಲಿನಲ್ಲಿ ರಾತ್ರಿ 12.30ರ ಸುಮಾರಿಗೆ ಯುವತಿ ಮನೆಗೆ ತೆರಳಿ ಬಾಗಿಲು ಬಡಿದಿದ್ದಾನೆ. ಮನೆಯವರು ಬಾಗಿಲು ತೆರೆಯುತ್ತಿದ್ದಂತೆ ಗಾಬರಿಗೊಂಡ ಮಹದೇವಸ್ವಾಮಿ ಪರಾರಿಯಾಗಲು ಯತ್ನಿಸಿ ಮೊದಲ ಮಹಡಿಯಿಂದ ಆಯತಪ್ಪಿ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಯುವಕನ ಪೋಷಕರು ಮಾತ್ರ ಯುವತಿಯ ಕುಟುಂಬಸ್ಥರೇ ತಮ್ಮ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

