ವಿಜಯಪುರ: ಹಾಡಹಗಲೇ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಿ, ಕಾರಿನಲ್ಲಿ ಬಲವಂತವಾಗಿ ಅಪಹರಿಸಿಕೊಂಡು ಹೋದ ಘಟನೆ ನಗರದ ಲುಂಬಿನಿ ಪಾರ್ಕ್ ಎದುರು ಶನಿವಾರ ನಡೆದಿದೆ. ಕ್ರಾಂತಿ ಪತ್ರಿಕೆಯ ಜಿಲ್ಲಾ ವರದಿಗಾರ ಸಾಗರ್‌ಕುಮಾರ ದೇಸಾಯಿ (35) ಅಪಹರಣಕ್ಕೊಳಗಾದವರು. ಬೆಳಗ್ಗೆ 11.45ರ ಸುಮಾರಿಗೆ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದ ನಾಲ್ವರು ಸಾಗರ್ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಬಳಿಕ ಸುತ್ತಮುತ್ತಲಿನವರು ಗಮನಿಸುವ ಮುನ್ನವೇ ಅವರನ್ನು ಕಾರಿನಲ್ಲಿ ಹಾಕಿಕೊಂಡು ವೇಗವಾಗಿ ಪರಾರಿಯಾಗಿದ್ದಾರೆ. ತಡೆಯಲು ಬಂದ ಹೋಂಗಾರ್ಡ್ ಸಿಬ್ಬಂದಿ ವಿಶ್ವ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಅಪಹರಣ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮೊಬೈಲ್ ಟವರ್ ಆಧರಿಸಿ ರಾಯಚೂರು, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೂ ಮಾಹಿತಿ ನೀಡಲಾಗಿದ್ದು, ಪೊಲೀಸರು ಹಲವು ತಂಡಗಳನ್ನು ರಚಿಸಿ ಹುಡುಕಾಟ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

