ತರೀಕೆರೆ: ತಂಗಿಯ ಮಗಳ ಕೆನ್ನೆಗೆ ಹೊಡೆದನೆಂಬ ಕ್ಷುಲ್ಲಕ ಕಾರಣಕ್ಕೆ ತಮ್ಮನೇ ಅಣ್ಣನನ್ನು ಕೊಲೆಗೈದ ಘಟನೆ ಲಿಂಗದಹಳ್ಳಿ ಹೋಬಳಿಯ ನಂದಿಬಟ್ಟಲು ಕಾಲೊನಿಯಲ್ಲಿ ಭಾನುವಾರ ನಡೆದಿದೆ.ಕೃಷ್ಣ ನಾಯ್ಕ (38 ವರ್ಷ) ಕೊಲೆಯಾದವರು. ಕೃಷ್ಣನಾಯ್ಕನ ತಮ್ಮ ಯುವರಾಜನಾಯ್ಕ ತನ್ನ ಮನೆಯಲ್ಲಿ ತಂಗಿಯ ಮಗಳನ್ನು ಸಾಕಿಕೊಂಡಿದ್ದ. ಆಕೆಯನ್ನು ಭಾನುವಾರ ಬೆಳಗಿನ ವೇಳೆಯಲ್ಲಿ ಹಸಿವಾಗಿದೆ ಊಟ ಬಡಿಸು ಎಂದು ಕೃಷ್ಣನಾಯ್ಕ ಕೇಳಿದ್ದಾನೆ. ಊಟ ಬಡಿಸಲು ಬರದೆ ಹಗಲಿನ ವೇಳೆಯಲ್ಲಿ ನಿದ್ರೆ ಮಾಡುತ್ತಿದ್ದಾಳೆ ಎಂದು ಕುಪಿತಗೊಂಡ ಕೃಷ್ಣನಾಯ್ಕ ಬಾಲಕಿಯ ಕೆನ್ನೆಗೆ ಹೊಡೆದಿದ್ದು, ಕೆನ್ನೆ ಊದಿಕೊಂಡಿತ್ತು. ಕೂಲಿ ಕೆಲಸಕ್ಕೆ ಹೋಗಿದ್ದ ಯುವರಾಜ ನಾಯ್ಕ ಕೆಲಸ ಮುಗಿಸಿ ಮನೆಗೆ ಬಂದು ವಿಷಯ ತಿಳಿದು ಗ್ರಾಮದ ತುಂಬೆಲ್ಲಾ ಅಟ್ಟಾಡಿಸಿಕೊಂಡು ಕೈಗೆ ಸಿಕ್ಕ ವಸ್ತುಗಳಿಂದ ಮನ ಬಂದಂತೆ ಥಳಿಸಿದ ಪರಿಣಾಮ ಕೃಷ್ಣ ನಾಯ್ಕ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಡಿವೈಎಸ್‌ಪಿ ಪರಶುರಾಮ್, ಸರ್ಕಲ್ ಇನ್‌ಸ್ಪೆಕ್ಟರ್ ಗಿರೀಶ್, ಲಿಂಗದಹಳ್ಳಿ ಠಾಣಾಧಿಕಾರಿ ರಾಜಕುಮಾರ್ ಹುತ್ತಲಿ, ಅಪರಾಧ ವಿಭಾಗದ ಪಿಎಸ್‌ಐ ಮಂಜುಳಾ ಬಾಯಿ ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನು ಬಂಧಿಸಿದ್ದಾರೆ. ಲಿಂಗದಹಳ್ಳಿ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

