ಮಂಡ್ಯ: ಮದ್ದೂರು ನಗರದ ಮಳವಳ್ಳಿ ರಸ್ತೆಯಲ್ಲಿರುವ ಗಿಲ್ ವುಡ್ ಫ್ಯಾಷನ್ ಪ್ರೈವೇಟ್ ಲಿಮಿಟೆಡ್ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಗುರುವಾರ ಬೆಳಗಿನ ಜಾವ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಸುಮಾರು ₹5ರಿಂದ ₹6 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂದು ಅಂದಾಜಿಸಲಾಗಿದೆ. ಸೋಮನಹಳ್ಳಿಯಿಂದ ಇತ್ತೀಚೆಗೆ ಮದ್ದೂರು ನಗರಕ್ಕೆ ಸ್ಥಳಾಂತರಗೊಂಡಿದ್ದ ಕಾರ್ಖಾನೆಯಲ್ಲಿ ಬೆಳಗ್ಗೆ ಕಾರ್ಮಿಕರು ಕೆಲಸಕ್ಕೆ ಬಂದಾಗ ಬೆಂಕಿ ಹೊತ್ತಿಕೊಂಡಿರುವುದು ಗಮನಕ್ಕೆ ಬಂದಿದೆ. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಮೂರಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿದರು. ಬೆಂಕಿಯ ತೀವ್ರತೆಗೆ ಕಾರ್ಖಾನೆಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಭಾರೀ ನಷ್ಟ ಸಂಭವಿಸಿದೆ. ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

