ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಫಾರ್ಮ್‌ಹೌಸ್‌ನಲ್ಲಿ ₹5 ಕೋಟಿ ಮೌಲ್ಯದ ಶಂಕಿತ ನಕಲಿ ಔಷಧಿಗಳನ್ನು ವಶಪಡಿಸಿಕೊಂಡ ಪ್ರಕರಣದ ತನಿಖೆ ವಿಸ್ತರಿಸಿದ್ದು, ಅಂತಾರಾಜ್ಯ ನಂಟಿನ ಶಂಕೆ ವ್ಯಕ್ತವಾಗಿದೆ. ಔಷಧಿಗಳನ್ನು ಮರುಪ್ಯಾಕ್ ಮಾಡಿ ಪ್ರತಿಷ್ಠಿತ ಕಂಪನಿಗಳ ಹೆಸರಿನ ಲೇಬಲ್ ಅಂಟಿಸಿ ಮಾರುಕಟ್ಟೆ ಹಾಗೂ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿತ್ತು ಎನ್ನಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಹಿಮಾಚಲ ಪ್ರದೇಶ, ತೆಲಂಗಾಣ, ದೆಹಲಿ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಸಂಪರ್ಕದ ಬಗ್ಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದ್ದು, ಈ ರಾಜ್ಯಗಳ ಡ್ರಗ್ ಕಂಟ್ರೋಲ್ ಅಧಿಕಾರಿಗಳೊಂದಿಗೆ ಸಮನ್ವಯ ನಡೆಸಲಾಗುತ್ತಿದೆ. ಔಷಧಿಗಳ ಬ್ಯಾಚ್ ಸಂಖ್ಯೆ, ಪ್ಯಾಕಿಂಗ್ ಕೋಡ್, ಲೇಬಲ್ ಹಾಗೂ ವಿತರಣಾ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ನಕಲಿ ಔಷಧಿಗಳು ಆಸ್ಪತ್ರೆ ಹಾಗೂ ಫಾರ್ಮಸಿಗಳಿಗೆ ತಲುಪಿದ್ದವೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಔಷಧಿಗಳ ಮೂಲ, ಪ್ಯಾಕಿಂಗ್ ಹಾಗೂ ಲೇಬಲ್ ಬದಲಾವಣೆಯ ಸ್ಥಳ ಮತ್ತು ಕರ್ನಾಟಕಕ್ಕೆ ಪೂರೈಕೆಯಾದ ಮಾರ್ಗ ಪತ್ತೆಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ. ಪ್ರಕರಣದ ಸಂಪೂರ್ಣ ಜಾಲ ಬಯಲಿಗೆಳೆಯಲು ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

