ರಾಯಚೂರು: ಸಿಂಧನೂರು ತಾಲೂಕಿನ ಹೊರವಲಯದ ಜಮೀನಿನಲ್ಲಿ 26 ವರ್ಷದ ಸ್ನೇಹಾ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರು ಶುಭಮ್ ಎಂಬಾತನನ್ನು ಬಂಧಿಸಿದ್ದಾರೆ. ಸೆ.19ರಂದು ಜಮೀನಿನಲ್ಲಿ ಸ್ನೇಹಾ ಮೃತದೇಹ ಪತ್ತೆಯಾಗಿದ್ದು, ಅವರ ಒಂದೂವರೆ ವರ್ಷದ ಮಗು ಮೃತದೇಹದ ಪಕ್ಕದಲ್ಲೇ ಇತ್ತು. ಪೊಲೀಸರ ಪ್ರಕಾರ ಸ್ನೇಹಾ ಹಾಗೂ ಶುಭಮ್ ನಡುವೆ ಆತ್ಮೀಯ ಪರಿಚಯವಿತ್ತು. ಘಟನೆ ನಡೆದ ದಿನ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಶುಭಮ್ ಹಲ್ಲೆ ನಡೆಸಿ ಸ್ನೇಹಾಳನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಮೃತ ಸ್ನೇಹಾ ಅವರ ಪತಿ ಅಮಿತ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಸಾಧ್ಯತೆಯಿದ್ದು, ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸ್ನೇಹಾ-ಶುಭಮ್ ನಡುವಿನ ಸಂಬಂಧ, ಹತ್ಯೆಗೆ ಕಾರಣ ಹಾಗೂ ಘಟನೆಯಲ್ಲಿ ಇತರರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಶುಭಮ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸಿಂಧನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
