ಬೆಂಗಳೂರು: ನಾಗಸಂದ್ರದಲ್ಲಿ ಬಾಡಿಗೆ ಮನೆಗೆ ಹಾಲು ಉಕ್ಕಿಸುವ ಕಾರ್ಯಕ್ರಮಕ್ಕೆ ಆಹ್ವಾನಿಸಿ ಮಹಿಳೆಯೊಬ್ಬರಿಂದ ₹1 ಲಕ್ಷ ನಗದು ಹಾಗೂ ಚಿನ್ನದ ಮಾಂಗಲ್ಯ ಸರ ದೋಚಿದ ಪ್ರಕರಣವನ್ನು ಪೀಣ್ಯಾ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೋರೆಗೌಡ, ಅಭಿ ಹಾಗೂ ಸತೀಶ್ ಎಂಬ ಮೂವರನ್ನು ಬಂಧಿಸಲಾಗಿದೆ. ನಾಗಮಂಗಲ ಮೂಲದ ಸುಜಾತಗೆ ಕೆಲ ತಿಂಗಳ ಹಿಂದೆ ಬೋರೆಗೌಡ ಪರಿಚಯವಾಗಿದ್ದು, ನಾಗಸಂದ್ರದಲ್ಲಿ ಬಾಡಿಗೆ ಮನೆ ಪಡೆದಿರುವುದಾಗಿ ಹೇಳಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ. ಆತನ ಮಾತು ನಂಬಿ ಸುಜಾತ ಪತಿಗೆ ತಿಳಿಸದೆ ₹1 ಲಕ್ಷ ಹಾಗೂ ಮಾಂಗಲ್ಯ ಸರದೊಂದಿಗೆ ಮನೆಗೆ ತೆರಳಿದ್ದರು. ಮನೆಗೆ ಬಂದ ಬಳಿಕ ಮೂವರು ಸೇರಿ ಆಕೆಯ ಕೈಕಾಲು ಕಟ್ಟಿ ಹಲ್ಲೆ ನಡೆಸಿ ಹಣ ಹಾಗೂ ಚಿನ್ನಾಭರಣ ಕಸಿದು ಪರಾರಿಯಾಗಿದ್ದರು. ಈ ಕುರಿತು ಪತಿ ವರದರಾಜು ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

