ಬೆಂಗಳೂರು: ಜಾಗದ ವಿಚಾರಕ್ಕೆ ಸಂಬಂಧಿಸಿದ ಗಲಾಟೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್, ಅವರ ಸಹೋದರರು ಸೇರಿದಂತೆ ಹಲವರ ವಿರುದ್ಧ ಹುಳಿಮಾವು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೊಲೆ ಯತ್ನ ಹಾಗೂ ಹಲ್ಲೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ಹೊಮ್ಮದೇವನಹಳ್ಳಿ ಗ್ರಾಮಠಾಣಾ-91ರ ಸೈಟ್ ವಿಚಾರವಾಗಿ ಗಲಾಟೆ ನಡೆದಿದೆ ಎನ್ನಲಾಗಿದೆ. ಅ.4ರಂದು ರಾತ್ರಿ ಫಾತಿಮಾ ಹಾಗೂ ಕಾಣಿಕ್ಯ ರಾಜ್ ದಂಪತಿ ಮನೆ ಬಳಿ 25ರಿಂದ 30 ಮಂದಿ ತೆರಳಿ ಲಾಂಗು, ಮಚ್ಚು, ದೊಣ್ಣೆ ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಫಾತಿಮಾ, ಕಾಣಿಕ್ಯ ರಾಜ್, ಬಾಲರಾಜ್, ನವೀನ್ ಕುಮಾರ್ ಹಾಗೂ ನಕ್ಷತ್ರ ಅವರ ಮೇಲೆ ಹಲ್ಲೆ ನಡೆದಿರುವುದಾಗಿ ತಿಳಿಸಲಾಗಿದೆ. ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್, ಅನಿಲ್ ಕುಮಾರ್, ಪ್ರವೀಣ್ ಕುಮಾರ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದೇ ಜಾಗದ ವಿಚಾರ ಕೋರ್ಟ್‌ನಲ್ಲೂ ಇದ್ದು, ಈ ಹಿಂದೆ ನಾಲ್ಕು ಬಾರಿ ಗಲಾಟೆ ನಡೆದಿತ್ತು ಎನ್ನಲಾಗಿದೆ. ಘಟನೆ ಬಳಿಕ ಪ್ರದೇಶದಲ್ಲಿ ಉದ್ವಿಗ್ನತೆ ಹಿನ್ನೆಲೆಯಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

