ಮಹಾಲೇಖಪಾಲಕರ (ಎಜಿ) ಲೆಕ್ಕಪರಿಶೋಧನೆಯಲ್ಲಿ ಸರ್ಕಾರಿ ಹಣ ದುರ್ಬಳಕೆ ಮಾಡಿರುವುದು ಬೆಳಕಿಗೆ ಬಂದಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ನೀಡಿದ ದೂರಿನ ಮೇರೆಗೆ ಎಸ್‌ಡಿಎ ಕನಕನಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಅನಂತಕುಮಾರ ಅವರು ಅವರನ್ನು ಅ.6ರಂದು ಅಮಾನತುಗೊಳಿಸಿದ್ದಾರೆ. ಲೆಕ್ಕಪರಿಶೋಧನೆ ವೇಳೆ 135 ಕಡತಗಳ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಕನಕನಗೌಡ ಕೇವಲ 45 ಕಡತಗಳನ್ನು ಮಾತ್ರ ಹಾಜರುಪಡಿಸಿದ್ದಾರೆ ಎನ್ನಲಾಗಿದೆ. 2020ರಿಂದಲೇ ಹಣ ದುರ್ಬಳಕೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ನಿವೃತ್ತ ನೌಕರರ ರಜೆ ನಗದೀಕರಣ, ಅತಿಥಿ ಶಿಕ್ಷಕರ ಗೌರವಧನ, ಜಿಪಿಎಫ್ ಹಾಗೂ ತುಟ್ಟಿಭತ್ಯೆ ಬಾಕಿ ಬಿಲ್‌ಗಳ ಮೂಲಕ ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಸರ್ಕಾರದ ಲಕ್ಷಾಂತರ ರೂ.ಗಳನ್ನು ತಮ್ಮ ಹಾಗೂ ಇತರ ಖಾಸಗಿ ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿರುವ ಆರೋಪವಿದೆ. ನಿಯಮ ಉಲ್ಲಂಘಿಸಿ ಕಡತಗಳನ್ನು ಕಚೇರಿಯಲ್ಲಿ ಮಂಡಿಸದೆ ಉಪಖಜಾನೆಗೆ ಬಿಲ್ ಕಳುಹಿಸಿ ಪಾವತಿಸಿಕೊಂಡಿರುವ ಆರೋಪದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

