ಹುಣಸೂರು: ಪತಿ-ಪತ್ನಿ ನಡುವಿನ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ನಗರದ ಮಾರುತಿ ಬಡಾವಣೆಯಲ್ಲಿ ನಡೆದಿದೆ. ಗಾರೆ ಕೆಲಸಗಾರ ಮಂಜುನಾಥ ಅಲಿಯಾಸ್ ಮಂಜ (37) ಮೃತಪಟ್ಟಿದ್ದು, ಎರಡನೇ ಪತ್ನಿ ಪ್ರೇಮಾಳನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲ ಪತ್ನಿಯಿಂದ ದೂರವಾಗಿದ್ದ ಮಂಜುನಾಥ್, ಪ್ರೇಮಾಳನ್ನು ಎರಡನೇ ಮದುವೆಯಾಗಿದ್ದ. ಮದ್ಯವ್ಯಸನಿಯಾಗಿದ್ದ ಆತ ಪತ್ನಿಯ ನಡತೆ ಬಗ್ಗೆ ಅನುಮಾನಗೊಂಡು ಆಗಾಗ್ಗೆ ಜಗಳವಾಡುತ್ತಿದ್ದ. ಶನಿವಾರ ಮಧ್ಯಾಹ್ನವೂ ದಂಪತಿ ನಡುವೆ ಜಗಳ ನಡೆದಿದ್ದು, ಬಳಿಕ ಮಂಜುನಾಥ್ ಮೃತಪಟ್ಟಿದ್ದಾನೆ. ತನ್ನ ಕುತ್ತಿಗೆ ಹಿಸುಕಿ ಕೊಲ್ಲಲು ಬಂದ ಪತಿಯ ಕುತ್ತಿಗೆಯನ್ನೇ ಹಿಸುಕಿದ್ದಾಗಿ ಪ್ರೇಮಾ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ತಾಯಿ ಸಾವಿತ್ರಮ್ಮ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
