ಬಾಗಲಕೋಟೆ: ಕಳೆದುಹೋದ ಚಿನ್ನದ ಉಂಗುರದ ವಿಚಾರವಾಗಿ ಗಂಡ-ಹೆಂಡತಿ ನಡುವೆ ನಡೆದ ಜಗಳ ದುರಂತ ಅಂತ್ಯ ಕಂಡಿದೆ. ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ಅಪ್ಪಾಶಿ ಹಾಗೂ ರಾಜೇಶ್ವರಿ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿದ್ದು, ಗ್ರಾಮದಲ್ಲಿ ದುಃಖ ಆವರಿಸಿದೆ. ರಾಜೇಶ್ವರಿಯ 5 ಗ್ರಾಂ ಚಿನ್ನದ ಉಂಗುರ ಆರು ತಿಂಗಳ ಹಿಂದೆ ಕಳೆದುಹೋಗಿತ್ತು. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ನಿನ್ನೆ ರಾತ್ರಿ ಮತ್ತೆ ಗಲಾಟೆಯಾಗಿದ್ದು, ಕುಟುಂಬಸ್ಥರು ಇಬ್ಬರಿಗೂ ಬುದ್ಧಿವಾದ ಹೇಳಿ ಸಮಾಧಾನಪಡಿಸಿದ್ದರು. ಬಳಿಕ ನಸುಕಿನ ಜಾವ ಅಪ್ಪಾಶಿ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಬೆಳಗ್ಗೆ ಪತಿಯ ಮೃತದೇಹ ಕಂಡ ರಾಜೇಶ್ವರಿ ಆಘಾತಕ್ಕೊಳಗಾಗಿದ್ದು, ಬಳಿಕ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಂಪತಿಯ ಸಾವಿನಿಂದ 4 ವರ್ಷದ ಮಗು ಹಾಗೂ 16 ತಿಂಗಳ ಮಗು ತಬ್ಬಲಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
